ಶಿವಮೊಗ್ಗ: ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಉತ್ತಮ ಜೀವನಶೈಲಿ ಹಾಗೂ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಹೇಳಿದರು.
ವಿಶ್ವ ಮಧುಮೇಹಗಳ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾ ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗ ಸೈಕಲ್ ಕ್ಲಬ್‌ನ ಎಲ್ಲ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ನೆರವೇರುತ್ತಿದೆ. ದಿನ ನಿತ್ಯ ಸೈಕಲ್ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಪ್ರತಿ ವರ್ಷ ವಿಶ್ವ ಮಧುಮೇಹಗಳ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಪ್ರಯುಕ್ತ ನಗರದಾದ್ಯಂತ ನಾವು ಸೈಕಲ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಈಗಾಗಲೇ ನಮ್ಮ ಶಿವಮೊಗ್ಗ ಸೈಕಲ್ ಕ್ಲಬ್ ನಿರಂತರವಾಗಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ಸೈಕಲ್ ಕ್ಲಬ್ ಗಿನ್ನಿಸ್ ದಾಖಲೆ ಮಾಡಿದ್ದು, ರಾಜ್ಯಕ್ಕೆ ಹೆಮ್ಮೆಯ ಸಂಗತಿ ಆಗಿದೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ನಾವು ನೀವೆಲ್ಲರೂ ಪಾಲ್ಗೊಳ್ಳೋಣ, ಕನ್ನಡ ಒಂದು ಸಂಸ್ಕೃತಿ. ನಮ್ಮ ಅವಿಭಾಜ್ಯ ಅಂಗ. ಪ್ರತಿನಿತ್ಯ ಕನ್ನಡದಲ್ಲಿ ಮಾತನಾಡುವುದು ಬರೆಯುವುದು ಕೇಳುವುದು ಮಾಡಬೇಕು. ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗದೆ ನಿರಂತರವಾಗಿ ಈ ಚಟುವಟಿಕೆ ನಡೆಯಬೇಕು ಎಂದರು.
ಶಿವಮೊಗ್ಗ ಸೈಕಲ್ ಕ್ಲಬ್, ಮೂರ್ತಿ ಫಿಟ್ನೆಸ್ ಹಾಗೂ ವಂದನಾ ಬೇಕರಿ ಸಹಕಾರದಿಂದ ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆ ಎದುರು ಭಾಗದಿಂದ ನಗರದಾದ್ಯಂತ ಸೈಕಲ್ ಜಾಥಾ ನಡೆಯಿತು.
ಜಾಗೃತಿ ಜಾಥಾದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್‌ನ ಡಾ. ಶೇಖರ್ ಗೌಳೇರ್, ನಟರಾಜ್, ಶ್ರೀಧರ್, ಹರೀಶ್ ಪಟೇಲ್, ಸುರೇಶ್, ಕಾರ್ಯದರ್ಶಿ ಗಿರೀಶ್ ಕಾಮತ್, ವಂದನಾ ಬೇಕರಿಯ ಮನೋಜ್, ರಜನಿಕಾಂತ್, ಭಾಗ್ಯರಾಜ್, ವರ್ಷ ಹಾಗೂ ಎಲ್ಲಾ ಮಕ್ಕಳು ಭಾಗವಹಿಸಿದ್ದರು.