ಶಿವಮೊಗ್ಗ: ಮಕ್ಕಳು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಹಾಗೂ ಹಲ್ಲು ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಹೇಳಿದರು.

ಶಿವಮೊಗ್ಗ ಶರಾವತಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ಬಾಯಿ, ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛ ಮತ್ತು ಆರೋಗ್ಯವಾಗಿಟ್ಟುಕೊಳ್ಳಬೇಕು. ಯಾವುದೇ ದುಶ್ಚಟಗಳನ್ನು ಮಾಡಬಾರದು ಎಂದು ತಿಳಿಸಿದರು.
ಮ್ಯಾಕ್ಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ನಿತಿನ್ ಶ್ಯಾಗಲೆ ಅವರು ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಪ್ರೌಢಾವಸ್ಥೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳ ದಂತ ಆರೋಗ್ಯ, ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಒಂದು ವರ್ಷದ ಅವಧಿಗೆ ಶಾಲೆಯ ಮಕ್ಕಳ ದಂತ ಆರೋಗ್ಯ ಹಾಗೂ ಕಣ್ಣಿನ ಆರೋಗ್ಯ ಹಾಗೂ ಮಕ್ಕಳ ಮಾನಸಿಕ ಆರೋಗ್ಯ ಸಂಬAಧಿಸಿ ದತ್ತು ಪಡೆಯಲಾಯಿತು.
ಡಾ. ದಿನೇಶ್ ಅವರ ತಂಡದಲ್ಲಿ ಕಣ್ಣು, ಕಿವಿ, ಗಂಟಲು ವೈದ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಲೇಖನಿಯನ್ನು ಕೊಟ್ಟು ಸಿಹಿ ಹಂಚಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. 83 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಶೋಭಾರಾಣಿ, ಶಿಕ್ಷಕರಾದ ಪರಮೇಶ್ವರ್, ಮಮತಾ, ಶಶಿಕುಮಾರ್, ಕಾಂಗ್ರೆಸ್ ಮುಖಂಡ ವಿನೋದ್, ಶಿವಮೊಗ್ಗ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಸುಮನ್ ರಾಜ್, ಕಾಂಗ್ರೆಸ್ ಮುಖಂಡ ಬಾಬು, ಅಬ್ರಾರ್, ಮಂಜುನಾಥ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ…