ರಾಜ್ಯ ಸರಕಾರ 7ನೆಯ ವೇತನ ಆಯೋಗವನ್ನು ಶನಿವಾರ ರಚಿಸಿದ್ದು, ಈ ಆಯೋಗವು ಕೇವಲ ನೌಕರರ ವೇತನ, ಭತ್ಯೆಯ ಪರಿಷ್ಕರಣೆ ಮಾತ್ರ ಈ ಬಾರಿ ಮಾಡಲಿದೆ. ಆದ್ದರಿಂದ ಅತಿ ಶೀಘ್ರದಲ್ಲಿ ಇದು ವರದಿ ನೀಡಲಿದ್ದು, ಸುಮಾರು 5.20 ಲಕ್ಷ ನೌಕರರು ಮತ್ತು ನಿಗಮ, ಮಂಡಳಿಯವರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇತನ ಆಯೋಗವನ್ನು ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದಲ್ಲಿ ರಚಿಸಿದ್ದರು.ಅಂದು ಸದಸ್ಯರನ್ನು ನೇಮಕ ಮಾಡಿರಲಿಲ್ಲ.ಶನಿವಾರ ಪೂರ್ಣ ಪ್ರಮಾಣದ ಸಮಿತಿಯನ್ನು ನೇಮಕ ಮಾಡಿದ್ದಾರೆ. ಆರ್ಥಿಕ ಇಲಾಖೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಮಿತಿಯ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ. ಬಿ. ರಾಮಮೂರ್ತಿ, ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ಶ್ರೀಕಾಂತ್ ವನಹಳ್ಳಿ ಮತ್ತು ಮೂಲಸೌಲಭ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಫ್ತಿಬಾ ರಾಣಿ ಕೊರ್ಲಪಾಟಿ ಅವರನ್ನು ನೇಮಿಸಿದೆ.ಸಿಎಂ ಮತ್ತು ಬಿ ಎಸ್ ವೈ ಗೆ ಅಭಿನಂದಿಸುವುದಾಗಿ ಹೇಳಿದರು.
ಸರಕಾರ ವೇತನ ಆಯೋಗವನ್ನು 5 ವರ್ಷ ಮೊದಲೇ ಘೋಷಣೆ ಮಾಡಿದ ಉದಾಹರಣೆ ಇಲ್ಲ. ಇದೇ ಮೊದಲ ಬಾರಿಗೆ ನಾಲ್ಕು ವರ್ಷ 5 ತಿಂಗಳಿಗೆ ಸರಕಾರ ಸಮಿತಿ ಘೋಷಿಸಿದೆ. ಇದರಿಂದ 5 ವರ್ಷಕ್ಕೆ ಸರಿಯಾಗಿ ಹೊಸ ವೇತನ ಪರಿಷ್ಕರಣೆ ಆಗಿ ಘೋಷಣೆ ಆಗಲು ಅನುಕೂಲವಾಗಲಿದೆ ಎಂದರು.ಸಮಿತಿಯು ರಾಜ್ಯ ನೌಕರರ ಸಂಘದ ಜೊತೆ ಚರ್ಚೆ ನಡೆಸಲಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಲಿದೆ. ಇದಾದ ಬಳಿಕ ವರದಿ ನೀಡಲಿದೆ. ಆದಷ್ಟು ಶೀಘ್ರ ಸರಕಾರ ಇದನ್ನು ಜಾರಿಗೊಳಿಸುವ ವಿಶ್ವಾಸವಿದೆ. ಸುಮಾರು 12 ಸಾವಿರ ಕೋಟಿಯಷ್ಟು ಹೆಚ್ಚು ವೆಚ್ಚ ಈ ವೇತನ ಪರಿಷ್ಕರಣೆಯಿಂದ ಆಗಲಿದೆ ಆಯೋಗ ರಚನೆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕಚೇರಿ ತಯಾರಾಗುತ್ತಿದೆ.ಮಾರ್ಚ್ ನಲ್ಲಿ 7 ನೇ ವೇತನ ಆಯೋಗ ಜಾರಿಗೊಳ್ಳುವ ನಿರೀಕ್ಷೆ ಇದೆ.12 ಸಾವಿರ ಕೋಟಿ ಹಣ ಸರ್ಕಾರಕ್ಕೆ ಹೆಚ್ಚುವರಿಯಾಗಲಿದೆ. 40% ಲಾಭ ಸರ್ಕಾರಿ ನೌಕರರಿಗೆ ಸಿಗಲಿದೆ. ನಿರೇಕ್ಷೆಗಿಂತ ಹೆಚ್ಚು ಕೆಲಸ ಮಾಡಲು ನೌಕರರು ಸಿದ್ದರಿದ್ದಾರೆ. ಎಂದು ವಿವರಿಸಿದರು. ವೇತನ ಅನುಷ್ಠಾನದ ನಂತರ ನೂತನ ಪಿಂಚಣಿ ವ್ಯವಸ್ಥೆ ವಿರುದ್ಧದ ಹೋರಾಟ ಆರಂಭವಾಗಲಿದೆ. ಅದನ್ನು ಸಂಘ ಕೈಬಿಟ್ಟಿಲ್ಲ ಎಂದ ತಿಳಿಸಿದರು.