ಶಿವಮೊಗ್ಗ: ಸೇವಾ ಕಾರ್ಯ ಹಾಗೂ ಸಮಾಜಮುಖಿ ಆಲೋಚನೆಯನ್ನು ನಿರಂತರವಾಗಿ ಕಾರ್ಯರೂಪಕ್ಕೆ ತರುತ್ತಿರುವ ಯಶಸ್ವಿ ಯುವ ನಾಯಕ ಡಿ.ಎಸ್.ಅರುಣ್ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ 50ನೇ ಜನ್ಮದಿನ ಹಾಗೂ ಶಾಸಕರಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಡಿ.ಎಸ್.ಅರುಣ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ, “ಒಂದು ಅವಲೋಕನ ಹಾಗೂ ಸಮಾಜ ಸೇವಾ ಕಾರ್ಯಗಳು” ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಜನರಿಗೆ ಸ್ಫೂರ್ತಿ ತುಂಬುವ ರೀತಿಯಲ್ಲಿ ರಾಜ್ಯದಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿಗಳ ಸಬಲೀಕರಣ, ಉದ್ಯಮಿಗಳಿಗೆ ಪೂರಕ ಯೋಜನೆಗಳ ಅನುಷ್ಠಾನ ಸೇರಿದಂತೆ ಎಲ್ಲರ ಧ್ವನಿಯಾಗಿ ವಿಧಾನ ಪರಿಷತ್ ನಲ್ಲಿ ಶಾಸಕರಾಗಿ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.
ತಂದೆ ಡಿ.ಎಚ್.ಶಂಕರಮೂರ್ತಿ ಅವರಂತೆ ದೇಶಭಕ್ತಿ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಯುವ ನಾಯಕ ಡಿ.ಎಸ್.ಅರುಣ್ ಅವರು ಯುವ ಸಮುದಾಯಕ್ಕೆ ಪ್ರೇರಣೆ ಆಗಿದ್ದಾರೆ ಎಂದರು.
ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾಗಿ ಒಂದು ವರ್ಷದಲ್ಲಿಯೇ ಅನೇಕ ಜನಪರ ಕಾರ್ಯಗಳನ್ನು ರಾಜ್ಯಮಟ್ಟದಲ್ಲಿ ಅನುಷ್ಠಾನ ಆಗುವಲ್ಲಿ ಕಾರಣ ಆಗಿರುವ ನಾಯಕ ಡಿ.ಎಸ್.ಅರುಣ್. ಗ್ರಾಮ ಪಂಚಾಯತಿ ಸದಸ್ಯರ ಪರ ಪರಿಷತ್ ನಲ್ಲಿ ಧ್ವನಿಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಮಾಡಿರುವ ಸೇವಾಕಾರ್ಯಗಳೇ ಶ್ರೀ ರಕ್ಷೆ ಎಂದು ಹೇಳಿದರು.
ಅಭಿಮಾನಿ ಬಳಗದ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪಕ್ಷದ ಮುಖಂಡರ ಮಾರ್ಗದರ್ಶನ ಹಾಗೂ ಎಲ್ಲರ ಪ್ರೀತಿ ಸಹಕಾರ, ಪ್ರೋತ್ಸಾಹ ದಿಂದ ಜೀವನದಲ್ಲಿ ಸಾಧನೆಯ ಹೆಜ್ಜೆ ಇಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಸಹಕಾರ ದಿಂದ ಸಾರ್ವಜನಿಕ ಸೇವೆಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ವಾಸವಿ ಸಂಸ್ಥೆಯ ಎಸ್.ಕೆ.ಶೇಷಾಚಲ ಮಾತನಾಡಿ, ಸ್ನೇಹಮಹಿ ವ್ಯಕ್ತಿತ್ವ ಹೊಂದಿರುವ ಅರುಣ್ ದಶಕಗಳಿಂದ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ವಿಧಾನ ಪರಿಷತ್ ಸದಸ್ಯರಾಗಿಯು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಲ್ಲ ಸಂಘ ಸಂಸ್ಥೆಗಳ ಜತೆಯು ಉತ್ತಮ ಒಡನಾಟ ಹೊಂದಿದ್ದಾರೆ. ಸರಳತೆಯ ರಾಜಕಾರಣಿ ಅರುಣ್ ಎಂದು ಶ್ಲಾಘಿಸಿದರು.
ಡಿ.ಎಸ್.ಅರುಣ್ ಅಭಿಮಾನಿಗಳ ಬಳಗದ ಸಂಚಾಲಕ ಶಶಿಧರ್ ಎಸ್.ಭೂಪಾಳಂ ಮಾತನಾಡಿ, ಅರುಣ್ ಸೇವಾ ಕ್ಷೇತ್ರದ ಕೊಡುಗೆ ಎಲ್ಲ ವರ್ಗದ ಜನರಿಗೂ ತಲುಪಿದೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಅರುಣ್ ಅವರು ಜೀವನದಲ್ಲಿ ಎಲ್ಲ ಯಶಸ್ಸು ಸಾಧಿಸಿ ಉನ್ನತ ಸ್ಥಾನ ಅಲಂಕರಿಸುವಂತಾಗಲಿ ಎಂಬುದು ಸ್ನೇಹಿತರು, ಅಭಿಮಾನಿಗಳ ಆಶಯ ಎಂದು ತಿಳಿಸಿದರು.
ಡಿ.ಎಸ್.ಅರುಣ್ ಜನ್ಮದಿನ ಪ್ರಯುಕ್ತ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊಲಿಗೆ ಯಂತ್ರಗಳ ವಿತರಣೆ, ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಕಿಟ್, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ, ಸಮಾಜಸೇವೆ ಮಾಡುತ್ತಿರುವ ಐದು ಸಂಸ್ಥೆಗಳಿಗೆ ಪ್ರೋತ್ಸಾಹ ಧನ, ಕ್ರೀಡಾಂಗಣ ಅಭಿವೃದ್ಧಿ, ಅತ್ತ್ಯುತ್ತಮ ಕಾರ್ಯ ನಿರ್ವಹಿಸಿದ ಐದು ಪಂಚಾಯಿತಿಗಳಿಗೆ ಅಭಿನಂದನೆ, 50ಕ್ಕೂ ಹೆಚ್ಚು ಜನರಿಂದ ರಕ್ತದಾನ ಶಿಬಿರ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ದಿನಪೂರ್ತಿ ಆಯೋಜಿಸಲಾಗಿತ್ತು.
ಬೆಂಗಳೂರು ವಾಸವಿ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಪ್ಪತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಅರುಣ್ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಸನ್ಮಾನಿಸಿದರು. ಸ್ನೇಹಿತರು, ಅಭಿಮಾನಿಗಳು ಶುಭಹಾರೈಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ, ಡಿ.ಎಸ್.ಅರುಣ್ ಅಭಿಮಾನಿಗಳ ಬಳಗದ ಸಂಚಾಲಕ ಶಶಿಧರ್ ಎಸ್.ಭೂಪಾಳಂ ಮತ್ತಿತರರು ಉಪಸ್ಥಿತರಿದ್ದರು.