ಶಿವಮೊಗ್ಗ: ಶರಾವತಿ ಮುಳುಗಡೆ ಸಂಸತ್ರಸ್ತರಿಗೆ ಮೊಸಳೆ ಕಣ್ಣೀರು ಸುರಿಸುವುದನ್ನು
ಬಿಜೆಪಿ ನಿಲ್ಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ
ಹೇಳಿದ್ದಾರೆ.

ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಕೇವಲ 15-20 ದಿನಗಳಲ್ಲಿ ಬಗೆಹರಿಸುತ್ತೇವೆ ಎಂದು
ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ ಮುಖಂಡರೆಲ್ಲ
ಸಂತ್ರಸ್ತರತ್ತ ಮುಖ ಮಾಡಿದ್ದಾರೆ. ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಡಬಲ್ ಇಂಜಿನ್ ಸರ್ಕಾರ ಇದ್ದು, ಸಂತ್ರಸ್ತರ ಸಮಸ್ಯೆ ಬಗೆಹರಿಸಿಲ್ಲ. ಕಾಂಗ್ರೆಸ್
ಬಗೆಹರಿಸಬಹುದಿತ್ತು ಎಂದು ದೂರುವುದನ್ನು ಬಿಟ್ಟರೆ ಅವರಿಗೇನು ಕೆಲಸವಿಲ್ಲ. ಅವರದೇ
ಸರ್ಕಾರದಲ್ಲಿ ಕಾನೂನು ಮಾಡುವ ಅವಕಾಶ ಇದ್ದರೂ ಸುಮ್ಮನಿದ್ದಾರೆ. ಮಗುವನ್ನು ಚಿವುಟಿ
ಅಳಿಸಿ ತೊಟ್ಟಿಲನ್ನು ತೂಗುವ ಜಾಣ್ಮೆ ಈ ಬಿಜೆಪಿಗರಿಗಿದೆ ಎಂದರು.

ಕಾಂಗ್ರೆಸ್ ಸಂತ್ರಸ್ತರ ಸಮಸ್ಯೆ ಇಟ್ಟುಕೊಂಡು ಬಹುದೊಡ್ಡ ಹೋರಾಟ ಹಮ್ಮಿಕೊಂಡ ಮೇಲೆ
ಬಿಜೆಪಿಯವರಿಗೆ ಎಚ್ಚರವಾಗಿದೆ. ಈಗ ಸಭೆ ಮಾಡಲು ಹೊರಟಿದ್ದಾರೆ. ಇಷ್ಟು ದಿನ ಇವರು
ಎಲ್ಲಿದ್ದರು ಚುನಾವಣೆಯ ಲಾಭ ಪಡೆಯಲು ಸಂತ್ರಸ್ತರಿಗೆ ಭರವಸೆ ನೀಡಬಾರದು ಕಾಂಗ್ರೆಸ್
ನಿಜಕ್ಕೂ ಸಂತ್ರಸ್ತರ ಸಮಸ್ಯೆಯನ್ನು ಇಟ್ಟುಕೊಂಡು ಈಗಾಗಲೇ ಜಿಲ್ಲೆಯ ಮತ್ತು ರಾಜ್ಯದ
ಮುಖಂಡರ ನೇತೃತ್ವದಲ್ಲಿ ಬಹುದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದು, ಇದಕ್ಕಾಗಿ ಅಲ್ಲಲ್ಲಿ
ಸಂತ್ರಸ್ತರ ಜಾಗೃತಿ ಸಭೆ ನಡೆಸುತ್ತಾ ಬಂದಿದೆ. ಬಿಜೆಪಿಯ ಬಣ್ಣದ ಮಾತಿಗೆ ಶರಾವತಿ
ಮುಳುಗಡೆ ಸಂತ್ರಸ್ತರು ಮೋಸಹೋಗಬಾರದು ಎಂದರು.

ನ.28ರಂದು ಬೆಳಗ್ಗೆ 8 ಗಂಟೆಗೆ ಕಾಂಗ್ರೆಸ್ ಜಾಗೃತ ಸಮಿತಿ ವತಿಯಿಂದ ಪಾದಯಾತ್ರೆ
ನಡೆಯಲಿದೆ. ಈ ಯಾತ್ರೆಯು ಶಿವಮೊಗ್ಗಕ್ಕೆ ತಲುಪಿ ಎನ್‌ಇಎಸ್ ಮೈದಾನದಲ್ಲಿ ಪ್ರತಿಭಟನಾ
ಸಭೆ ಮತ್ತು ಸಂತ್ರಸ್ಥರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ರಾಜ್ಯ ಮತ್ತು
ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗವಹಿಸುತ್ತಿದ್ದಾರೆ. ಸಂತ್ರಸ್ತರು, ಕಾಂಗ್ರೆಸ್
ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ರಮೇಶ್ ಕೋರಿದ್ದಾರೆ.