ಸರಿಸುಮಾರು ಕಳೆದ ಒಂದು ವರ್ಷದಿಂದ ನೆಹರು ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಎರಡು ಬೃಹತ್ ಕಟ್ಟಡಗಳ ನಿರ್ಮಾಣವಾಗುತ್ತಿದೆ.
ಈ ಕಟ್ಟಡಗಳ ನಿರ್ಮಾಣದಲ್ಲಿ ಯಾವುದೇ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡದ ಗೋಡೆಗಳ ನಿರ್ಮಾಣ ಹಂತದಲ್ಲಿ ಯಾವುದೇ ಕ್ಯೂರಿಂಗ್ ಮಾಡದೆ ಇಂದು ಮಾನ್ಯ ಶಾಸಕರು ಸ್ಮಾರ್ಟ್ ಸಿಟಿ ಕಾಮಗಾರಿಗಳ ತಪಾಸಣೆಗಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ಕ್ಯೂರಿಂಗ್ ಮಾಡಲಾಗಿದೆ ಹಾಗೂ ಕಟ್ಟಡದ ಸುತ್ತಮುತ್ತಲು ಸ್ವಚ್ಛಗೊಳಿಸಲಾಗಿದೆ.
ಈ ಕಟ್ಟಡ ಕಾಮಗಾರಿಯ ಕಾರಣದಿಂದಾಗಿ ನೆಹರು ಕ್ರೀಡಾಂಗಣದ ಸಾವಿರಾರು ಜನ ವಾಕಿಂಗ್ ಮಾಡುವ ಟ್ರ್ಯಾಕ್ ಉಬ್ಬು ತಗ್ಗುಗಳು ಮತ್ತು ಸಂಪೂರ್ಣ ಧೂಳಿನಿಂದ ತುಂಬಿ ಹೋಗಿದ್ದು ಇದರ ಬಗ್ಗೆ ಎಷ್ಟೇ ಹೋರಾಟ ಮಾಡಿದರೂ ಗುತ್ತಿಗೆದಾರರಾಗಲಿ ಅಥವಾ ಸ್ಮಾರ್ಟ್ ಸಿಟಿ ಇಂಜಿನಿಯರ್ಸ್ ಗಳಾಗಲಿ ಯಾವುದೇ ಗಮನ ನೀಡಿರುವುದಿಲ್ಲ.
ಮಾನ್ಯ ಶಾಸಕರು ವೀಕ್ಷಣೆಗೆ ಬರುತ್ತಾರೆ ಎನ್ನುವ ಹಿಂದಿನ ದಿನ ಕಾಮಗಾರಿ ನಡೆಯುತ್ತಿರುವ ಸ್ಥಳ ಮತ್ತು ಸುತ್ತಲಿನ ಜಾಗವನ್ನು ಸ್ವಚ್ಛ ಮಾಡುವುದು ಇತ್ತೀಚಿಗೆ ಸರ್ವೇಸಾಮಾನ್ಯವಾಗಿ ಕಾಣುತ್ತಿದೆ.
ಆದ್ದರಿಂದ ಮಾನ್ಯ ಶಾಸಕರಲ್ಲಿ ನಮ್ಮ ವಿನಂತಿ ಏನೆಂದರೆ, ದಯಮಾಡಿ ಸ್ಮಾರ್ಟ್ ಸಿಟಿ ಇಂಜಿನಿಯರ್ಸ್ ಗಳ ಜೊತೆ ಕಾಮಗಾರಿಗಳ ವೀಕ್ಷಣೆಗೆ ಹೋಗುವ ಬದಲಾಗಿ ಸಂಘ ಸಂಸ್ಥೆಗಳ ಜೊತೆಗೆ ಸೇರಿ ವೀಕ್ಷಣೆ ಮಾಡಿದಲ್ಲಿ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಮಾನ್ಯ ಶಾಸಕರನ್ನು ಅಧಿಕಾರಿಗಳು ದಾರಿ ತಪ್ಪಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ನೆಹರು ಕ್ರೀಡಾಂಗಣದ ಮುಂಭಾಗದ ಕಟ್ಟಡದ ಎದುರು ಭಾಗದಲ್ಲಿರುವ ಡೆಬ್ರೀಸ್ಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ವಾಕಿಂಗ್ ಟ್ರ್ಯಾಕ್ ಅನ್ನು ಮಟ್ಟಮಾಡಿ ಪ್ರತಿನಿತ್ಯ ನೀರು ಹಾಯಿಸಬೇಕು. ಈ ಕೆಲಸಗಳು ಆಗದಿದ್ದಲ್ಲಿ ನಾವುಗಳು ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ ಎಂದು ಎಚ್ಚರಿಸುತ್ತೇವೆ.
ಡಾ.ಎ.ಸತೀಶ್ ಕುಮಾರ್ ಶೆಟ್ಟಿ
ಸಂಘಟನಾ ಕಾರ್ಯದರ್ಶಿ ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆಗಳ ಒಕ್ಕೂಟ