ಬಂಟ ಸಮಾಜದ ಸಂಘಟನೆಯ ಮೂಲಕ ಇತರ ಸಮಾಜದ ವರ್ಗಕ್ಕೂ ಮುಕ್ತ ನೆರವು ನೀಡುವ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿಗೆ ಕಾರಣವಾಗಿರುವ ಒಕ್ಕೂಟಕ್ಕೆ ಸಮಾಜ ಬಾಂಧವರಿಂದ ನೀಡುತ್ತಿರುವ ಸ್ಪಂದನೆಯೇ ಮೂಲ ಕಾರಣವಾಗಿದೆ. ಸಮಾಜದಲ್ಲಿ ಎಲ್ಲಾ ಸಮಾಜದ ಸಂಘಟನೆಯೂ ಇದೇ ರೀತಿಯ ಯೋಚನೆಯಲ್ಲಿ ಯೋಜನೆ ರೂಪಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಡುಬೈಲ್ ನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಜಮೀನಿಗೆ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ನಾಮಕರಣ ಮಾಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯ ಯೋಜನೆಗಳಿಗೆ ದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಮೂರುವರೆ ಕೋಟಿ ರೂ.ಗೂ ಮಿಕ್ಕಿದ ಮೊತ್ತವನ್ನು ಒಕ್ಕೂಟದ ಯೋಜನೆಗಳಿಗೆ ಒದಗಿಸಿ ಸೂಕ್ತ ನಿವೇಶನ ಪಡೆಯುವಲ್ಲಿ ಹಾಗೂ ನೆರವು ನೀಡುವ ಯೋಜನೆಗಳಿಗೆ ಸಹಕರಿದ್ದಾರೆ ಎಂದರು.
ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ನಿರ್ಮಾಣಗೊಂಡ ಬಳಿಕ ಬಿಪಿಲ್ ಕಾರ್ಡುದಾರರಿಗೆ ಮದುವೆಗೆ ಹಾಲ್ ನ್ನು ಉಚಿತವಾಗಿ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಇಲ್ಲಿ ಅವಕಾಶ ನೀಡಲಾಗುವುದು ಎಂದವರು ತಿಳಿಸಿದರು.
ದಾನಿಗಳ ನೆರವನ್ನು ಪಡೆದು ಸುಮಾರು 15 ಕೋಟಿ ರೂ. ಮೊತ್ತವನ್ನು ಸಂಗ್ರಹಿಸಿ ಅವಿಭಜಿತ ದ.ಕ. ಜಿಲ್ಲೆಯ ಅಲ್ಲದೆ ಇತರೆಡೆಯ ಬಂಟ ಸಮಾಜ ಮತ್ತು ಇತರ ಸಮಾಜದ ಅರ್ಹರಿಗೆ ಸಹಾಯ ಹಸ್ತದ ನೆರವನ್ನು 30 ಲಕ್ಷ ರೂಪಾಯಿಗೂ ಮಿಕ್ಕಿದ ಮೊತ್ತದಲ್ಲಿ ಪ್ರತೀ ತಿಂಗಳು ನೀಡಲಾಗುತ್ತಿದೆ ಎಂದರು.
ಸಮಾಜ ಸೇವಕ ಕನ್ಯಾಸ ಸದಾಶಿವ ಶೆಟ್ಟಿ ಅವರು ಸಂಕೀರ್ಣವನ್ನು ಉದ್ಘಾಟಿಸಿ, ಮಾತನಾಡಿ ಇಂದು ಸಮಾಜದಲ್ಲಿ ಬಂಟ ಸಮಾಜವು ಸಮರ್ಥ ಸಂಘಟನೆಯ ಮೂಲಕ ಬೆಳೆದು ಕೊನೆಯ ವ್ಯಕ್ತಿಯನ್ನು ತಲುಪಲು ಸಾಧ್ಯವಾಗುತ್ತಿದೆ, ಒಕ್ಕೂಟದ ಕಾರ್ಯವೈಖರಿಯನ್ನು ಗುರುತಿಸಿ ಇನ್ನಷ್ಟು ಪ್ರೋತ್ಸಾಹ ನೀಡುವ ಮೂಲಕ ಈ ಸಂಕೀರ್ಣ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಾಗೇಶ್ ಶೆಟ್ಟಿ ಮಸ್ಕತ್, ಬಪ್ಪನಾಡು ಮನೋಹರ ಶೆಟ್ಟಿ, ಕಾಂಗ್ರೆಸ್ ರಾಜ್ಯ ನಾಯಕ ಮಿಥುನ್ ರೈ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ಮೂಲ್ಕಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯ ಯೋಗೀಶ್ ಕೋಟ್ಯಾನ್, ಉಳ್ತೂರು ಮೋಹನ್‌ದಾಸ್ ಶೆಟ್ಟಿ, ವಿಶ್ವ ಪ್ರಸಿದ್ಧ ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಸಂತೋಷ್‌ಕುಮಾರ್ ಹೆಗ್ಡೆ, ಶಶಿಧರ ಶೆಟ್ಟಿ ಇನ್ನಂಜೆ, ಪ್ರವೀಣ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಮತ್ತಿತರರು ಇದ್ದರು.