ಶಿವಮೊಗ್ಗ: ಪ್ರಪಂಚದಲ್ಲಿ ಸನಾತನ ಧರ್ಮವು ಶ್ರೇಷ್ಠ ಆಗಿದ್ದು, ಹಿಂದೂ ಧರ್ಮವಾಗಿ ಗುರುತಿಸಲ್ಪಡುತ್ತದೆ. ಪ್ರಾಚೀನ ಕಾಲದಿಂದಲೂ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಸನಾತನ ಧರ್ಮ, ಹಿಂದೂ ಧರ್ಮವು ಒಂದೇ ಆಗಿದೆ. ಸನಾತನ ಹಾಗೂ ಹಿಂದೂ ಧರ್ಮ ಬೇರೆ ಬೇರೆಯಲ್ಲ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ಶ್ರೀ ಶೃಂಗೇರಿ ಶಂಕರಮಠ, ಶ್ರೀಗಂಧ ಸಂಸ್ಥೆ ಹಾಗೂ ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧರ್ಮ ಎಂದರೆ ಸಮಸ್ತ ಜಗತ್ತನ್ನು ಧರಿಸಲ್ಪಟ್ಟಿರುವುದು. ಅನಾದಿಕಾಲದಿಂದಲೂ ಬಂದಿರುವುದೇ ಸನಾತನ ಧರ್ಮ. ಪೂರ್ಣ ಜಗತ್ತಿಗೂ ಧರ್ಮವೇ ಆಧಾರ. ಧರ್ಮದ ಆಚರಣೆ ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಯಶಸ್ಸು ಎಲ್ಲರಿಗೂ ಅನುಗ್ರಹ ಆಗುತ್ತದೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಪ್ರತಿ ಪದಕ್ಕೂ ಗಂಭೀರ ಅರ್ಥ ವಿದೆ ಎಂದು ತಿಳಿಸಿದರು.
ಧರ್ಮ ಕ್ಷೀಣಿಸಿದರೆ ಭಗವಂತ ತಾನೇ ಅವತರಿಸುವುದಾಗಿ ಭಗವದ್ಗೀತೆ ಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿಯವರೆಗೂ ಧರ್ಮ ರಕ್ಷಣೆ ಕಾರ್ಯದಲ್ಲಿ ಮುನ್ನಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಧರ್ಮ ಅವಲಂಬಿಸಿರುವ ಎಲ್ಲರೂ ನಿರಂತರವಾಗಿ ಆಚರಣೆ ಮಾಡಿದರೆ ಧರ್ಮ ಉಳಿಯುತ್ತದೆ. ಹಿರಿಯರು ತೋರಿಸಿದ ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶೃಂಗೇರಿ ಕ್ಷೇತ್ರ ನಿತ್ಯವು ಜ್ಞಾನ ಹಾಗೂ ಅನ್ನದಾಸೋಹದಲ್ಲಿ ನಿರಂತರವಾಗಿದೆ. ಸನಾತನ ಸಂಸ್ಕೃತಿಯ ಶ್ರೇಷ್ಠತೆ ಹಾಗೂ ಧರ್ಮ ಪ್ರಸಾರದಲ್ಲಿ ಶೃಂಗೇರಿ ಮಠ ಅತ್ಯದ್ಭುತ ಕೆಲಸ ಮಾಡಿ ನಮಗೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದೆ. ಜಗದ್ಗುರುಗಳ ದರ್ಶನ ಭಾಗ್ಯ ಭಕ್ತರ ಪುಣ್ಯ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಶೃಂಗೇರಿ ಆಡಳಿತಾಧಿಕಾರಿ ಡಾ. ವಿ.ಆರ್.ಗೌರಿಶಂಕರ್, ಶಿವಮೊಗ್ಗ ಶ್ರೀ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ. ಪಿ.ನಾರಾಯಣ, ಸಾಗರ ತಾಲೂಕು ಶಂಕರ ಮಠದ ಧರ್ಮದರ್ಶಿ ಅಶ್ವಿನ್ ಕುಮಾರ್, ಹಿರಿಯ ಮುಖಂಡರಾದ ಎಚ್.ಎಸ್.ಶಿವಶಂಕರ್ ರಾವ್, ಎಂ.ಆರ್.ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್.ಶಿವಕುಮಾರ್, ಸಂಚಾಲಕ ಬಿ.ಆರ್.ಮಧುಸೂದನ್, ಸುಧೀಂದ್ರ ಕಟ್ಟೆ ಮತ್ತಿತರರು ಹಾಜರಿದ್ದರು.