ಶಿವಮೊಗ್ಗ: ಸಂಗೀತ ಸಾಧನೆಗೆ ನಿರಂತರ ಅಭ್ಯಾಸ ಹಾಗೂ ಧ್ವನಿ ಸಂಸ್ಕರಣೆ ಏಕಾಗ್ರತೆ ಅತ್ಯಂತ ಮುಖ್ಯ. ಸಂಗೀತ ಸಾಧಕನ ಸ್ವತ್ತು ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಖಜಾಂಚಿ ಜಿ.ವಿಜಯಕುಮಾರ್ ಹೇಳಿದರು.

ಶಿವಮೊಗ್ಗ ನಗರದ ಎ ಆರ್ ಬಿ ಕಾಲನಿಯ ಭದ್ರಾವತಿ ವಾಸು ಅವರ ಸಭಾಂಗಣದಲ್ಲಿ ಆಯೋಜಿಸಿದ್ದ ಧ್ವನಿ ಸಂಸ್ಕರಣ ಕಂಠ ಸ್ಥಿತಿ ಪಾಠ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಸಂಗೀತ ಅಭ್ಯಾಸವನ್ನು ಮಾಡಿದರೆ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ. ಜೊತೆಗೆ ಸಂಗೀತಕ್ಕೆ ಪ್ರಾಣಾಯಾಮ ತುಂಬಾ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಹವ್ಯಾಸಿ ಸಂಗೀತಗಾರರಿಂದ ಮೂಲ ಶಾಸ್ತ್ರೀಯ ಸಂಗೀತಕ್ಕೆ ಧಕ್ಕೆಯಾಗುತ್ತಿದೆ. ಮಕ್ಕಳು ಗುರುಗಳ ಮಾರ್ಗದರ್ಶನದಲ್ಲಿ ಸಂಗೀತ ಅಭ್ಯಾಸ ಆರಂಭಿಸಬೇಕು. ಸರಿಯಾದ ಜ್ಞಾನ ಹಾಗೂ ತಿಳವಳಿಕೆಯಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ನಗರದ ಖ್ಯಾತ ಗಾಯಕ ಭದ್ರಾವತಿ ವಾಸು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಎಲ್ಲ ವಿದ್ಯಾರ್ಥಿಗಳಿಗೆ, ಶಿಬಿರಾರ್ಥಿಗಳಿಗೆ ಸರಳಿ ಜಂಟಿ ಸಂಗೀತದ ಏರಿಳಿತಗಳು ಹಾಗೂ ಕಲಿಕಾ ವಿಧಾನಗಳನ್ನು ತಿಳಿಸಿದರು. ಸಂಗೀತ ಅಭ್ಯಾಸವನ್ನು ಹೇಗೆ ಮಾಡಬೇಕೆಂದು ಹಾಡುಗಳ ಮೂಲಕ ಪರಿಚಯಿಸಿದರು. ಈ ಶಿಬಿರ ಒಂದು ತಿಂಗಳ ಕಾಲ ನಡೆಯಲಿದೆ.
ಡಿಸೆಂಬರ್ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಭಾವ ಗಾನ ಕಾರ್ಯಕ್ರಮ ಹಾಗೂ ಗಾಯನ ಕಾರ್ಯಕ್ರಮ ಏರ್ಪಡಿಸಲಾಗುರುವುದು ಎಂದು ತಿಳಿಸಿದರು. ಈ ಶಿಬಿರದಲ್ಲಿ ಹೋಟೆಲ್ ಮಧುರ ಪ್ಯಾರಡೈಸ್ನ ಮ್ಯಾನೇಜರ್ ಮತ್ತು ಗಾಯಕ ನಾಗರಾಜ ಗಾಯಕರಾದ ಸೋಮಶೇಖರ್ ತಿಮ್ಮಪ್ಪ, ಪ್ರಕಾಶ್, ಉಷಾ, ಪ್ರತಿಮಾ, ಪರಶುರಾಮ್, ಸುಪ್ರಿಯಾ, ಸುಷ್ಮಾ, ಮಮತಾ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…