ಭಾವಸಾರರಿಂದ ವಿಶ್ವ ಸಾಧಕನಿಗೆ “ವೈದ್ಯ ಗಂಧರ್ವ” ಬಿರುದು ಪ್ರದಾನ…

ಬರೆದಿದ್ದನ್ನ ಓದುವ, ಓದಿದ್ದನ್ನ ಬರೆಯುವ ಯಾವುದಾದರೂ ಭಾಷೆ ಇದೆ ಎಂದರೆ ಅದು ಕನ್ನಡ ಎಂದು ವಿಶ್ವ ದಾಖಲೆ ಪುರಸ್ಕೃತ, ಯುವ ವೈದ್ಯ ಡಾ. ರಾಹುಲ್ ದೇವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಗಾಂಧಿ ಬಜಾರ್ ನ ತುಳಜಾ ಭವಾನ್ ಸಭಾಂಗಣದಲ್ಲಿ ಭಾವಸಾರ ಕ್ಷತ್ರಿಯ ಯುವಕ ಸಂಘದಿಂದ ಆಯೋಜಿಸಲಾಗಿದ್ದ, ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಹೊರಗಿನಿಂದ ಬಂದವರು ಕನ್ನಡ್ ಗೊತ್ತಿಲ್ಲ ಎಂದು ಹೇಳುತ್ತಾರೆ. ಅವರಿಗೆ ಕನ್ನಡ ಕಲಿಸಿ. ಅದೇ ನಾವು ತಮಿಳುನಾಡಿನಲ್ಲಿ ತಮಿಳು, ಅಥವಾ ಬೇರೆ ರಾಜ್ಯದಲ್ಲಿ ಆಯಾ ಭಾಷೆ ಮಾತನಾಡದೇ ಹೋದರೆ, ಅಲ್ಲಿ ನಮಗೆ ಗೌರವ ಸಿಗುವುದಿಲ್ಲ. ಕನ್ನಡವನ್ನು ಪೂಜಿಸಿ, ಗೌರವಿಸಿ, ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು. ಕನ್ನಡಕ್ಕೆ ಹಲವಾರು ರೀತಿಯಲ್ಲಿ ತುಳಿಯುವ ಕೆಲಸಗಳಾಗಿವೆ. ಆದರೆ, ಕನ್ನಡಕ್ಕೆ ಅದರದೇ ಆದ ಮೌಲ್ಯವಿದ್ದು, ಕನ್ನಡದ ಗೌರವ ಕೊಂಚವೂ ಕಡಿಮೆಯಾಗಿಲ್ಲ. ಮನೆಯಲ್ಲಿ ಮಕ್ಕಳಿಗೆ ಕನ್ನಡದ ಬಗ್ಗೆ ಹೆಚ್ಚು ಜ್ಞಾನ ವೃದ್ಧಿಸುವಂತಾಗಬೇಕು. ಪೋಷಕರು ಕನ್ನಡದ ಜ್ಞಾನದ ಬಗ್ಗೆ ಮಕ್ಕಳಿಗೆ ಹೆಚ್ಚು ಅರಿವು ಮೂಡಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಕೆ.ಈ. ಕಾಂತೇಶ್ ಮಾತನಾಡಿ, ಅತ್ತ ಮಹಾರಾಷ್ಟ್ರ ಗಡಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದರೆ, ಅದೇ ಮರಾಠರು ಇಲ್ಲಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು, ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು. ಕನ್ನಡದ ಅಸ್ಮಿತೆಯನ್ನು, ಪೂಜಿಸಿ, ಗೌರವಿಸುವುದರ ಜೊತೆಗೆ ಪ್ರತಿಭಾ ಪುರಸ್ಕಾರದ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವುದು, ನಿಜಕ್ಕೂ ಸಂತಸದ ವಿಚಾರ, ಈ ಕಾರ್ಯಕ್ರಮಗಳು, ಸಮಾಜದ ಎಲ್ಲಾ ವರ್ಗದವರಿಗೂ ತಲುಪಬೇಕೆಂದು ಕಿವಿ ಮಾತು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಸಾಧಕ ಡಾ. ರಾಹುಲ್ ದೇವರಾಜ್ ಅವರಿಗೆ “ವೈದ್ಯ ಗಂಧರ್ವ” ಎಂದು ಬಿರುದು ಪ್ರದಾನ ಮಾಡಲಾಯಿತು. ಜೊತೆಗೆ 32 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವಸಾರ ಕ್ಷತ್ರಿಯ ಯುವಕ ಸಂಘದ ಅಧ್ಯಕ್ಷ ಸಚಿನ್ ಬೇದ್ರೆ ವಹಿಸಿದ್ದರು. ಈ ವೇಳೆ, ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷರಾದ ಗಜೇಂದ್ರನಾಥ್ ಮಾಳೋದೆ, ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಓಂಪ್ರಕಾಶ್ ತೇಲ್ಕರ್, ಯುವಕ ಸಂಘದ ಮಾಜಿ ಅಧ್ಯಕ್ಷ ವಿನಯ್ ತಾಂದ್ಲೆ, ಕಾರ್ಯದರ್ಶಿ ಕಿರಣ್ ಬಾಂಬೋರೆ ಸೇರಿದಂತೆ ಹಲವರಿದ್ದರು.

ವರದಿ ಪ್ರಜಾಶಕ್ತಿ…