ಮಹಾನಗರ ಪಾಲಿಕೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಅಥವಾ ಇನ್ನಿತರ ಸಾಂವಿಧಾನಿಕ ಹುದ್ದೆಗೆ ರಾಜೀನಾಮೆ ನೀಡುವ ಸಮಯ ಬಂದಾಗ ಸಹಜವಾಗಿ ನಮಗೆ ಮನಸ್ಸಿನಲ್ಲಿ ಕಳವಳ ಉಂಟಾಗುತ್ತದೆ, ಆದರೆ ದೇಶದ ಅತ್ಯುನ್ನತ ನಾಗರಿಕ ಹುದ್ದೆಯಾದ ಪ್ರಧಾನಿ ಹುದ್ದೆಯನ್ನು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಅಲಂಕರಿಸಿ ಒಬ್ಬ ಸಂಸದನ ಕೊರತೆಯಿಂದ ಕೇವಲ 13 ದಿನಗಳಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶಕ್ಕೆ ಮಾದರಿಯಾದರು ಎಂದು ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ನೆನಪು ಮಾಡಿಕೊಂಡರು.

ಶಿವಮೊಗ್ಗ ನಗರದ ವಾರ್ಡ್ ನಂ. 10ರ ಹನುಮಂತ ನಗರ ಮತ್ತು ವಿನಾಯಕ ನಗರದ ಬಡ ಜನತೆಗೆ ಭಾರತ ರತ್ನ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬದ ಅಂಗವಾಗಿ ಎ.ಪಿ.ಎಂ.ಸಿ ಹಾಗೂ ಸೂಡಾದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಹಮ್ಮಿಕೊಂಡಿದ್ದ “ಉಚಿತ ಬ್ಲಾಂಕೆಟ್” ವಿತರಣಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ವಾಜಪೇಯಿ ಅವರು ಅಂದು ಮನಸ್ಸು ಮಾಡಿದ್ದರೆ 10ಕ್ಕೂ ಅಧಿಕ ಮಂದಿ ಸಂಸದರ ವಿಶ್ವಾಸ ಪಡೆದು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅವರು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಯಾವುದೇ ಸರ್ಕಾರಿ ಹುದ್ದೆ ಶಾಶ್ವತ ಅಲ್ಲ, ಪಕ್ಷದ ಕಾರ್ಯಕರ್ತನ ಸ್ಥಾನ ಶಾಶ್ವತ ಎಂದು ಹೇಳಿ ದೇಶಕ್ಕೆ ಮಾದರಿಯಾದರು ಎಂದು ನೆನಪು ಮಾಡಿಕೊಂಡರು.

ಶಾಸಕರಾದ ಶ್ರೀ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ಅಟಲ್ ಜೀ ಅವರ ಹುಟ್ಟುಹಬ್ಬದಂದು ಈ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ದೇಶದಲ್ಲಿ ಅವರ ಹುಟ್ಟು ಹಬ್ಬದಂದು ಈ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇದೇ ಮೊದಲು ಎನ್ನಬಹುದು, ಅವರ ತತ್ವ ಸಿದ್ಧಾಂತಗಳನ್ನು ಜೊತೆಗೆ ಅವರು ತೋರಿಸಿದ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.

ಜ್ಯೋತಿ ಪ್ರಕಾಶ್ ಅವರು ಮಾತನಾಡಿ, ಅಟಲ್ ಜೀ ಜನ್ಮ ದಿನದ ಪ್ರಯುಕ್ತ ಸಾಮಾಜಿಕ ಕಾರ್ಯ ಮಾಡಬೇಕು ಎಂದು ಆಲೋಚಿಸಿದಾಗ, ಚಳಿಗಾಲದ ಈ ಸಮಯದಲ್ಲಿ ಬಡ ಜನರಿಗೆ ಬ್ಲಾಂಕೆಟ್ ವಿತರಣೆ ಮಾಡಬೇಕು ಎಂದು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಮ್ಮ ಮನಸ್ಸಿನ ಮಾತನ್ನು ವ್ಯಕ್ತಪಡಿಸಿದರು. ಮುಂದುವರಿದು, ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಭಾರತ್ ಜೋಡೋ ಕಾರ್ಯಕ್ರಮ ಮಾಡುತ್ತಿದ್ದಾರೆ, ಆದರೆ ಅಟಲ್ ಜೀ ಅವರು ಅವರ ಆಡಳಿತ ಅವಧಿಯಲ್ಲಿ ಪೂರ್ವ ದಿಂದ ಪಶ್ಚಿಮಕ್ಕೆ ಉತ್ತರಿಂದ ದಕ್ಷಿಣಕ್ಕೆ ಉತ್ತಮ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿ ಅಂದೇ ದೇಶವನ್ನು ಉತ್ತಮ ಸಂಪರ್ಕದ ಮೂಲಕ ಜೋಡಿಸಿದ್ದಾರೆ ಎಂದರು. ಪಾಕಿಸ್ತಾನವು ಭಾರತದ ಗಡಿ ಭಾಗ ಕಾರ್ಗಿಲ್ ಪ್ರದೇಶದಲ್ಲಿ ಒಳನುಸುಳಿದ ಸಂದರ್ಭದಲ್ಲಿ ಅಟಲ್ ಅವರು ತಗೆದುಕೊಂಡ ಕ್ಷಿಪ್ರಗತಿಯ ತೀರ್ಮಾದ ಪರಿಣಾಮ ಶತ್ರು ರಾಷ್ಟ್ರದ ಎಡೆಮುರಿ ಕಟ್ಟಲಾಯಿತು, ಇಂತಹ ಮಹಾನ್ ನಾಯಕ ನಮ್ಮ ಅಟಲ್ ಜೀ ಅವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷರಾದ ಶ್ರೀ ಜಗದೀಶ್ ಅವರು, ಮಹಾನಗರ ಪಾಲಿಕೆ ಮಹಾ ಪೌರರಾದ ಶ್ರೀ ಶಿವಕುಮಾರ್ ಅವರು, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ವಿಶ್ವಾಸ ಅವರು, ಶ್ರೀಮತಿ ಆರತಿ ಅವರು, ಶ್ರೀ ರಾಹುಲ್ ಬಿದರೆ ಅವರು, ಸೂಡಾ ಅಧ್ಯಕ್ಷರಾದ ಶ್ರೀ ನಾಗರಾಜ್ ಅವರು, ಮುಖಂಡರಾದ ಶ್ರೀ ರಾಜಶೇಖರ್ ಅವರು, ಆರ್.ಎಸ್.ಎಸ್ ಗಿರೀಶ್ ಕಾರಂತ ಅವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…