ನಾವು ಚಲಾಯಿಸುವ ವಾಹನ ಸುಸ್ಥಿತಿಯಲ್ಲಿ ಇದೆಯೇ ಎಂಬದನ್ನು ಖಾತರಿ ಪಡಿಸಿಕೊಳ್ಳಲು ತಲೆಕೆಡಿಸಿಕೊಳ್ಳುವ ನಾವುಗಳು, ನಮ್ಮ ದೈನಂದಿನ ಆರೋಗ್ಯ ಕಾಪಾಡಿಕೊಳ್ಳಲು ಅಷ್ಟಾಗಿ ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ ಎಂದು ಮಾಜಿ ಎ.ಪಿ.ಎಂ.ಸಿ ಹಾಗೂ ಸೂಡಾ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಹೇಳಿದರು.
ಅವರು ಶಿವಮೊಗ್ಗದ ಪ್ರಖ್ಯಾತ ಯುನೈಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ.) ಸಂಸ್ಥೆಯು ಖ್ಯಾತ ರಾಷ್ಟ್ರೀಯ ವಾಲಿಬಾಲ್ ಆಟಗಾರ ದಿ. “ಸರ್ದಾರ್ ಜಾಫರ್” ಅವರ ಸ್ಮರಣಾರ್ಥ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ “ಪದವಿ ಪೂರ್ವ ಕಾಲೇಜು”ಗಳ “ಹೊನಲು-ಬೆಳಕಿನ” “ವಾಲಿಬಾಲ್ ಪಂದ್ಯಾವಳಿ”ಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಹಾಗೂ ದಿನ ನಿತ್ಯ ವ್ಯಾಯಾಮ, ಯೋಗ ಮಾಡುವ ಮೂಲಕ ತಮ್ಮ ದೈಹಿಕ ಸ್ಥಿರತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಎರಡು ವರ್ಷಗಳ ಹಿಂದೆ ಮಹಾಮಾರಿ ಕೊರೋನಾ ರೋಗವು ದೇಶದಲ್ಲಿ ಅಪ್ಪಳಿಸಿದ ಸಂದರ್ಭದಲ್ಲಿ ಯಾರು ದೈಹಿಕವಾಗಿ, ಮಾನಸಿಕವಾಗಿ ಸ್ಥಿರತೆ ಹೊಂದಿದ್ದರೋ ಅವರು ರೋಗದಿಂದ ಗೆದ್ದು ಬಂದರು ಇದನ್ನು ಯಾರು ಮರೆಯಬಾರದು, ಹಾಗಾಗಿ ಪ್ರತಿ ನಿತ್ಯ ಕನಿಷ್ಟ ಒಂದು ಗಂಟೆಗಳ ಕಾಲವಾದರೂ ನಮ್ಮ ದೇಹವನ್ನು ದಂಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಹಾಗೂ ಬದಲಾದ ಆಹಾರ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ದುಡಿಯಬೇಕು ಅದರಲ್ಲಿ ಕೂಡಿಡಬೇಕು ಎಂದು ಹೊರಡುವ ನಾವುಗಳು ಆರೋಗ್ಯದ ಕಡೆ ನಿರ್ಲಕ್ಷ್ಯವಹಿಸುತ್ತೇವೆ, ಆರೋಗ್ಯ ಹದಗೆಟ್ಟಾಗ ದುರದೃಷ್ಟವಶಾತ್ ನಾವು ಕೂಡಿಟ್ಟ ಹಣವೆಲ್ಲ ಆಸ್ಪತ್ರೆಗೆ ಕಟ್ಟುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಬಹುತೇಕ ಎಲ್ಲಾ ವಾರ್ಡ್ ಗಳಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣವಾಗಿದೆ, ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್ ಕೂಡ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು ಹತ್ತು ಕೋಟಿ ಅನುದಾನ ನೀಡಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಈ ಮೂಲಕ ಪ್ರತಿಯೊಬ್ಬರೂ ಆರೋಗ್ಯದಿಂದ ದೈನಂದಿನ ಜೀವನ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಅಧ್ಯಕ್ಷರಾದ ಕೆ.ಎಸ್. ಶಶಿ , ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಕಾಮತ್ , ಶಿವಪ್ಪ ನಾಯಕ ಕಬಡ್ಡಿ ಕ್ಲಬ್ ಅಧ್ಯಕ್ಷರಾದ ಶ್ರೀನಾಥ್ , ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ನಕುಲ ದೇವ್, ಶಿವಮೊಗ್ಗ Decathlon ಮಾಲೀಕರಾದ ನಿರಂಜನ , ಪ್ರಮುಖರಾದ ಶ್ರೀಮತಿ ಪ್ರತಿಭಾ ಜಾಫರ್ , ಗೋವಿಂದ ರಾಜ್ ಸೇರಿದಂತೆ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.