ಶಿವಮೊಗ್ಗ: ದೇಶಕ್ಕಾಗಿ ಪ್ರಾಣ ತೆತ್ತು ಹುತಾತ್ಮರಾದ, ಮಹನೀಯರ ಜನ್ಮದಿನವನ್ನು ಸಮಾಜಮುಖಿ ಸೇವೆಗಳ ಮುಖಾಂತರ ಆಚರಿಸಬೇಕು. ರಕ್ತದಾನದಂತಹ ಸೇವಾ ಕಾರ್ಯಗಳನ್ನು ನಡೆಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.
ನಗರದ ಜೆಪಿಎನ್ ರಸ್ತೆಯಲ್ಲಿರುವ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ದೇಹ ಸದೃಢವಾಗುವ ಜತೆಯಲ್ಲಿ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಇತ್ತೀಚೀನ ವಿಶ್ವಸಂಸ್ಥೆ ವರದಿ ಪ್ರಕಾರ ರಕ್ತದಾನದಿಂದ ಶೇ. 80ರಷ್ಟು ಹೃದಯಾಘಾತ ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ಭಾವಸಾರ ವಿಜನ್ ಇಂಡಿಯಾ ಪ್ರೇರಣ ಸಂಸ್ಥೆಯು ಕರೋನಾ ಸಂದರ್ಭದಲ್ಲಿಯು ಉತ್ತಮ ಸೇವಾ ಕಾರ್ಯಗಳನ್ನು ನಡೆಸಿತ್ತು. ಕಷ್ಟದಲ್ಲಿರುವವರ ಜನರಿಗೆ ನೆರವು ನೀಡಿತ್ತು.
ಮುಂದಿನ ದಿನಗಳಲ್ಲಿಯು ಸಂಸ್ಥೆಯು ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಿ ಎಂದು ಆಶಿಸಿದರು.
ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷ ಮಿಥುನ ಉತ್ತರಕರ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಪ್ರತಿ ವರ್ಷ ಎರಡು ಬಾರಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಾರ್ಯದರ್ಶಿ ಯಶವಂತ್ ಅಂಬೋರೆ, ಚಾರ್ಟರ್ ಪ್ರೆಸಿಡೆಂಟ್ ವೆಂಕಟೇಶ, ಪ್ರದೀಪ್ ಉತ್ತರಕರ್, ಸಾವನ್ ರಂಗದೊಳ್, ಪ್ರಶಾಂತ್ ಕೊಳೇಕರ್, ಮಂಜುನಾಥ್ ಮಾಲತ್ಕರ್ ಮತ್ತು ಸಂಸ್ಥೆಯ ನಿರ್ದೇಶಕರುಗಳು ರಕ್ತದಾನ ಮಾಡಿದರು. ಡಾ. ಪ್ರೀತಿ, 110 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಮತ್ತಿತರರು ಉಪಸ್ಥಿತರಿದ್ದರು.