ಶಿವಮೊಗ್ಗ : ಸಾಹಿತ್ಯವೆಂಬುದು ಜಾತಿ ಧರ್ಮಗಳನ್ನು ಮೀರಿದ್ದು ನೋವುಂಡವರ ನೆಲೆಗೆ ಹತ್ತಿರವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಹದಿನೇಳನೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.

ಸಾಹಿತ್ಯಕ್ಕೆ ಭಾಷೆ ಎಂಬುದು ನೆಪ. ಅದರೊಳಗಿರುವ ವಿಶ್ವಕ್ಕೆ ಯಾವುದೇ ಅಡತಡೆಗಳಿಲ್ಲ. ಅದಕ್ಕಾಗಿಯೇ ವಾಲ್ಮೀಕಿ, ಟಾಲ್ಸ್ಟಾಯ್ ತಮ್ಮ ಸಾಹಿತ್ಯದ‌ ಮೂಲಕ ಹತ್ತಿರವಾಗುತ್ತಾರೆ. ಸಾಹಿತ್ಯ ಸೋತವರಿಗೆ ಸಾಂತ್ವನ ನೀಡುತ್ತದೆ‌. ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಲವರಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲಕ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸಾಕ್ಷಿ ಪ್ರಜ್ಞೆಯನ್ನು ಮೂಡಿಸಿದರು.

ದುಸ್ತರ ಕಾಲಘಟ್ಟದಲ್ಲಿ ಅದನ್ನು ಎದುರಿಸುವ ಮನಸ್ಸುಗಳನ್ನು ಬೆಂಬಲಿಸದಿದ್ದಲ್ಲಿ ಅದು ನಾವೂ ಮಾಡಿದ ದ್ರೋಹದಂತಾಗುತ್ತದೆ. ಜಾಗತಿಕ ನೆಲೆಯೊಳಗೆ ಎದುರಿಸುತ್ತಿರುವ ಕನ್ನಡದ‌ ಸಮಸ್ಯೆಗಳ ಬಗ್ಗೆ ಮುಖಾಮುಖಿ ಚರ್ಚೆಗಳ ಅವಶ್ಯಕತೆಯಿದೆ.

ಗಂಭೀರವಾದ ವಿಚಾರಗಳ ಚರ್ಚೆ ಸಾಹಿತ್ಯ ಸಮ್ಮೇಳನದ ಘನತೆಯನ್ನು ಹೆಚ್ಚಿಸಿದೆ. ಅಧ್ಯಾಪಕರು ಶಿಕ್ಷಣದ ಬಗ್ಗೆ ಚರ್ಚಿಸುವ ಗೋಷ್ಟಿಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಭಾಯಿಸಬೇಕಾದ ಕೌಶಲ್ಯತೆಗಳನ್ನು ರೂಡಿಸಿಕೊಳ್ಳಬೇಕಿದೆ. ಸಾಹಿತ್ಯ ಸಮ್ಮೇಳನದ ಚರ್ಚಿತ ವಿಚಾರಗಳನ್ನು ಕನ್ನಡದ ಮನಸ್ಸುಗಳು ಆತ್ಮಾವಲೋಕನ ನಡೆಸಬೇಕಿದೆ ಎಂದು ಹೇಳಿದರು‌.

ಸಮ್ಮೇಳನಾಧ್ಯಕ್ಷರಾದ ಲಕ್ಷ್ಮಣ್ ಕೊಡಸೆ ಮಾತನಾಡಿ, ಸಾಹಿತ್ಯ ಸಮ್ಮೇಳನ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾರಸ್ವತ ಲೋಕದಿಂದ ಅನೇಕ ಗೌರವಗಳನ್ನು ಪಡೆಯುವಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಕಾರಣ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಅರಣ್ಯ ಇಲಾಖೆ‌ ನೌಕರರ ಮಹಾಮಂಡಲದ‌ ರಾಜ್ಯಾಧ್ಯಕ್ಷರಾದ ರಘುರಾಮ ದೇವಾಡಿಗ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಸಮ್ಮೇಳನಾಧ್ಯಕ್ಷರಾದ ಲಕ್ಷ್ಮಣ್ ಕೊಡಸೆ ಅವರನ್ನು ಸನ್ಮಾನಿಸಿದರು. ಶಿವಮೊಗ್ಗ ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಶಿಕಾರಿಪುರ ತಾಲ್ಲೂಕು ಕಸಾಪ ಅಧ್ಯಕ್ಷರಾದ ಹೆಚ್.ಎಸ್.ರಘು, ಹೊಸನಗರ ತಾಲ್ಲೂಕು ಕಸಾಪ ಅಧ್ಯಕ್ಷರಾದ ತಾ.ಮ.ನರಸಿಂಹ, ಭದ್ರಾವತಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಯಾವುದೇ ವಿಚಾರಗಳನ್ನು ಚರ್ಚಿಸುವವರನ್ನು ಶತ್ರುಗಳ ರೀತಿಯಲ್ಲಿ ನೋಡಲಾಗುತ್ತಿದೆ. ಜಿಲ್ಲಾ ಸಮ್ಮೇಳನ ಸಂಘಟಿಸುವಾಗ ಕಸಾಪ ಖಾತೆಯಲ್ಲಿದ್ದದ್ದು ಹದಿನಾಲ್ಕು ಸಾವಿರ ಮಾತ್ರ. ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಜನರು ನೀಡಿದ ಪ್ರತಿನಿಧಿ ಶುಲ್ಕವೂ ಸಮ್ಮೇಳನದ ಒಂದಿಷ್ಟು ಹೊರೆಯನ್ನು ತಗ್ಗಿಸುತ್ತಿದೆ. ಅನುದಾನ ಬಿಡುಗಡೆಯಾಗುತ್ತದೆಯೊ ಇಲ್ಲವೊ, ಅದರೇ ಕೊಡುವ ಮನಸ್ಸುಗಳು ಸದಾ ನಮ್ಮೊಂದಿಗೆ ಜೊತೆಯಾಗಿ ನಿಂತಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.

ವರದಿ ಪ್ರಜಾ ಶಕ್ತಿ…