ಶಿವಮೊಗ್ಗ: ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ , ಸಂಸದರದ ಬಿ ವೈ ರಾಘವೇಂದ್ರ , ಗ್ರಾಮಾಂತರ ಶಾಸಕರಾದ ಆಶೋಕ ನಾಯ್ಕ್ ರವರ ಪರಿಶ್ರಮ ಮತ್ತು ಆಸಕ್ತಿಯ ಹಿನ್ನೆಲೆಯಲ್ಲಿ ನಗರಕ್ಕೆ ಸಮೀಪದ ಗೋವಿಂದಪುರ ಬಡಾವಣೆಯಲ್ಲಿ ಬಹುಮಹಡಿ ಕಟ್ಟಡಗಳ ಸುಮಾರು 3 ಸಾವಿರ ಆಶ್ರಯ ಮನೆಗಳು ಮೂಲಭೂತ ಸೌಕರ್ಯದಿಂದ ಸುಸಜ್ಜಿತವಾಗಿ ನಿರ್ಮಾಣಗೊಳ್ಳುತ್ತಿವೆ.
ಬಡವರು ಹಾಗೂ ಮಧ್ಯಮ ವರ್ಗದ ಜನರ ಮತ್ತು ಪರಿಶಿಷ್ಟ ಜಾತಿ ವರ್ಗದವರ ಅನುಕೂಲಕ್ಕಾಗಿ ಅವರಿಗೆ ಒಂದು ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಯಶಸ್ವಿಯಾಗುತ್ತಿದೆ.
ಈಗಾಗಲೇ 300 ಮನೆಗಳು ಸಂಪೂರ್ಣ ಸಿದ್ಧವಾಗಿದ್ದು, ಮತ್ತೆ 300 ಮನೆಗಳು 2 ತಿಂಗಳಲ್ಲಿ ಪೂರ್ಣ ಗೊಳ್ಳಲಿವೆ. ಉಳಿದ ಮನೆಗಳು ನಿರ್ಮಾಣ ಹಂತದಲ್ಲಿದ್ದು, ಅಡಿಪಾಯ ಹಾಕಲಾಗಿದೆ. ಈಗಾಗಲೇ ಈ ಬಡಾವಣೆಗೆ ಅಗತ್ಯವಿರುವ ನೀರು ಪೂರೈಕೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಫೆಬ್ರವರಿ 8ರಂದು ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದು, ಈ ಸಂದರ್ಭದಲ್ಲಿ 300 ಫಲಾನುಭವಿ ಗಳಿಗೆ ಮನೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ. 6 ರಂದು ಆಯ್ದ 600 ಫಲಾನುಭವಿಗಳಲ್ಲಿ 300 ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಶಿವಮೊಗ್ಗ ಕ್ಷೇತ್ರದ ಶಾಸಕರಾದ ಕೆ.ಎಸ್. ಈಶ್ವರಪ್ಪ ಅವರ ನೆಹರೂ ರಸ್ತೆಯ ಕಛೇರಿಯಲ್ಲಿ ಫೆ.6ರ ಬೆಳಿಗ್ಗೆ 9.30ಕ್ಕೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅದೃಷ್ಟವಂತ 300 ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದು, ಇವರಿಗೆ ಫೆ. 8ರಂದು ಗೋವಿಂದಪುರ ಬಡಾವಣೆಯಲ್ಲಿ ಜರುಗುವ ಸಮಾರಂಭದಲ್ಲಿ ಮನೆಗಳ ವಿತರಣೆ ಇರುತ್ತದೆ ಎಂದು ಶಶಿಧರ್ ಅವರು ತಿಳಿಸಿದ್ದಾರೆ.
ಪ್ರತಿ ಬ್ಲಾಕ್‌ನಲ್ಲಿ 3 ಅಂತಸ್ತಿನ ಕಟ್ಟಡಗಳು ನಿರ್ಮಾಣವಾಗಿದ್ದು, ಪ್ರತಿ ಅಂತಸ್ತಿನಲ್ಲಿ ನಿಗದಿತ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಬಹುಕೋಟಿ ವೆಚ್ಚದ ಅಂದರೆ ಸುಮಾರು 220 ಕೋಟಿ ವೆಚ್ಚದಲ್ಲಿ ಈ ಮನೆಗಳ ನಿರ್ಮಾಣವಾಗುತ್ತಿದೆ.
ಒಂದು ಮನೆಗೆ 7.70 ಲಕ್ಷ ರೂ. ನಿಗದಿ ಮಾಡಿದ್ದು, ಪರಿಶಿಷ್ಟ ಜಾತಿ ವರ್ಗದವರಿಗೆ ರಿಯಾಯ್ತಿ ಇರುತ್ತದೆ. ಮನೆಗಳನ್ನು ಗುಣಮಟ್ಟದಲ್ಲಿ ಕಟ್ಟಲಾಗಿದ್ದು, ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ತಿಳಿಸಿದ್ದಾರೆ.
ಇದೇ ರೀತಿ ಗೋಪಶೆಟ್ಟಿಕೊಪ್ಪದಲ್ಲಿ 2ನೇ ಹಂತದಲ್ಲಿ 1836 ಮನೆಗಳನ್ನು ನಿರ್ಮಿಸುವ ಯೋಜನೆ ಸಹ ಪ್ರಗತಿಯಲ್ಲಿದೆ ಎಂದು ಶಶಿಧರ್ ತಿಳಿಸಿದ್ದಾರೆ. ಶೀಘ್ರದಲ್ಲೇ ಇವುಗಳ ವಿತರಣೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಫೆ. 8ರಂದು ಮಾನ್ಯ ಮುಖ್ಯಮಂತ್ರಿಗಳು ಫಲಾನುಭವಿಗಳಿಗೆ ಮನೆಗಳ ವಿತರಣೆ ಮಾಡಲಿದ್ದು, ಶಾಸಕರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್. ಈಶ್ವರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡರು, ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ್ ನಾಯ್ಕ ಹಾಗೂ ಪಾಲಿಕೆ ಸದಸ್ಯರು ಮತ್ತು ಗಣ್ಯ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ತಿಳಿಸಿದ್ದಾರೆ.