ವಿ.ಐ.ಎಸ್.ಎಲ್ ಉಳಿವಿಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರಿಂದ ಅಭಿಯಾನದೊಂದಿಗೆ ಪ್ರತಿಭಟನೆ
ನಡೆಸಿದರು.
ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿರುವ 1923 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾದ ಮಾನ್ಯ ಶ್ರೀ ಭಾರತ ರತ್ನ ವಿಶ್ವೇಶ್ವರಯ್ಯರವರ ಸಹಕಾರದಿಂದ ವಿಶ್ವೇಶ್ವರಯ್ಯ ಐರನ್ & ಸ್ಟೀಲ್ ಲಿ., ಕೈಗಾರಿಕೆಯನ್ನು ಸ್ಥಾಪಿಸಲಾಯಿತು.ಈ ಕೈಗಾರಿಕೆಯು ಏಷ್ಯಾ ಖಂಡದ ಪ್ರಪ್ರಥಮ ಐರನ್ & ಸ್ಟೀಲ್ ಕಂಪನಿಯಾಗಿದ್ದು, ಭಾರತದ ಸೈನ್ಯದ ಗುಂಡು ತಯಾರಿಕೆಗೆ ಉತ್ಕೃಷ್ಠ ಗುಣಮಟ್ಟದ ಕಬ್ಬಿಣವನ್ನು ಸರಬರಾಜು ಮಾಡುತ್ತಿದ್ದ ಹೆಗ್ಗಳಿಕೆಯ ಕೈಗಾರಿಕೆಯಾಗಿರುತ್ತದೆ.ಸಾವಿರಾರು ಜನ ಕಾರ್ಮಿಕರಿಗೆ ಅನ್ನವನ್ನು ನೀಡಿದ ಕೈಗಾರಿಕೆಯಾಗಿದ್ದು, ಅಲ್ಲದೆ ಕರ್ನಾಟಕ ರಾಜ್ಯ ಹಾಗೂ ದೇಶದ ಹೆಮ್ಮೆಯ ಕೈಗಾರಿಕೆಯಾಗಿರುತ್ತದೆ. ಇತ್ತೀಚೆಗೆ ಸೈಲ್ ( SAIL ) ಅಥಾರಿಟಿಯು ಮೇಲ್ಕಂಡ ಕೈಗಾರಿಕೆಯ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ತೀರ್ಮಾನಿಸಿರುವ ಕಾರಣ ಕರ್ನಾಟಕ ರಾಜ್ಯದ ಸಾರ್ವಜನಿಕ ವಲಯದ ಹೆಮ್ಮೆಯ ಈ ಕೈಗಾರಿಕೆ ಇತಿಹಾಸದ ಪುಟದಲ್ಲಿ ಸೇರಿಕೊಂಡು ನೆನಪು ಮಾತ್ರವಾಗಲಿದೆ.
ಆದ ಕಾರಣ ಮಲೆನಾಡಿನ ಹೆಮ್ಮೆಯ ಉಕ್ಕು ಹಾಗೂ ಕಬ್ಬಿಣದ ಈ ಕೈಗಾರಿಕೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೆ ಆತ್ಮನಿರ್ಭರ ಹಾಗೂ ಮೇಕಿನ್ ಇನ್ ಇಂಡಿಯಾ ಯೋಜನೆಯ ಪ್ರತಿಪಾದಕರಾದ ತಾವು ಭಾರತ ದೇಶದ ಪುರಾತನವಾದ ಈ ಹೆಮ್ಮೆಯ ಯೋಜನೆಗೆ ಅಗತ್ಯ ಆರ್ಥಿಕ ನೆರವನ್ನು ಬಿಡುಗಡೆಗೊಳಿಸಿ ಮೇಲ್ಕಂಡ ಕೈಗಾರಿಕೆಯ ಪುನರ್ಶ್ಚೇತನಕ್ಕೆ ಅನುವು ಮಾಡಿಕೊಡಬೇಕೆಂದು ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಶ್ರೀಮತಿ.ರೇಖಾ ರಂಗನಾಥ್ ರವರ ನೇತ್ರತ್ವದಲ್ಲಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು
ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಬಿ.ಎ.ರಮೇಶ‍್ ಹೆಗ್ಡೆ, ಹೆಚ್.ಸಿ.ಯೋಗೇಶ‍್, ಆರ್.ಸಿ.ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೆಹೆಕ್ ಷರೀಫ್, ಮುಖಂಡರಾದ ಕೆ.ರಂಗನಾಥ್, ಜಗದೀಶ‍್ ಇದ್ದರು.