ಶಬ್ದಗಳು ಸಿಗುತ್ತಿಲ್ಲ ಏನು ಹೇಳುವೋದು ಗೊತ್ತಾಗುತ್ತಿಲ್ಲ ,ಕಳೆದ ಹತ್ತಾರು ವರ್ಷಗಳಿಂದ ಶಿವಮೊಗ್ಗದಲ್ಲಿ ನನಗೆ ಎಲ್ಲಿ ಊಟ ಸಿಗದೇ ಇದ್ದರೂ ಅ ಪ ರಾಮಭಟ್ಟರ ಮನೆಯಲ್ಲಿ ಊಟ ಯಾವತ್ತೂ ಎಷ್ಟೊತ್ತಿಗೆ ಹೋದರು ಇರುತ್ತಿತ್ತು.

ಅವರು ಅದೇಷ್ಟೇ ಕಾರ್ಯದ ಒತ್ತಡದಲ್ಲಿ ಇದ್ದರೂ ಅವರ ಮನೆಯ ತಾಯಂದಿರು ಪ್ರತಿ ಸಾರಿಯೂ ಒಂದೇ ತರದ ಭಾವನೆಯಿಂದ ಪ್ರೀತಿಯಿಂದ ಊಟ ಬಡಿಸುತ್ತಿದ್ದರು, ರಾಮಭಟ್ಟರಂತೂ ಪಕ್ಕದಲ್ಲಿ ಕುಳಿತು ಊಟ ವಾಗುವ ತನಕ ಮಾತನಾಡುತ್ತಾ ಕೂರಲೇ ಬೇಕಿತ್ತು ,ಅದೇಷ್ಟು ಪ್ರೀತಿ ಅವರಿಗೆ,ದೇವರು ಅವರನ್ನು ಇಷ್ಟು ಬೇಗ ಕರೆದುಕೊಂಡನಲ್ಲಾ ಎನ್ನುವ ಆಘಾತ ನೋವು ತುಂಬಾ ಆಗುತ್ತಿದೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಜನಪ್ರತಿನಿಧಿಯ ಕರ್ತವ್ಯದ ವಿವಿಧ ಸಭೆಗಳಿಗೆ ಹೋಗಬೇಕಾದಗ ಹೋಟೆಲ್ ತೆರೆದಿರುತ್ತಿರಲಿಲ್ಲ.

ಕುಡಿಯಲು ನೀರು ಕೂಡ ಸಿಗದೇ ಇದ್ದ ಕೊರೋನಾ ಕಾಲಘಟ್ಟದಲ್ಲಿ ಶಿವಮೊಗ್ಗದಲ್ಲಿ ನಮಗೆ ಒಳ್ಳೇ ಊಟ ರಾಮ ಭಟ್ಟರ ಮನೆಯಲ್ಲಿ ತಯಾರಿರುತ್ತಿತ್ತು, ನಾವು ಶಿವಮೊಗ್ಗ ಬರುವ ವರ್ತಮಾನ ಮೊದಲೇ ತಿಳಿದುಕೊಂಡು ಮಧ್ಯಾಹ್ನ ಊಟಕ್ಕೆ ಮನೆಗೆ ಬರಬೇಕು ಅಂತ ಕರೆ ಮಾಡುತ್ತಿದ್ದರು,ನನಗೆ ಮಾತ್ರವಲ್ಲದೇ ಜೊತೆಗಿದ್ದ ನನ್ನ ಸಿಬ್ಬಂದಿ ಮತ್ತು ಪಕ್ಷದ ಸ್ನೇಹಿತರಿಗೂ, ಅದು ಒಮ್ಮೋಮ್ಮೆ 2 ಅಂಕಿ ದಾಟಿದ ಸಂಖ್ಯೆಗೂ ಅವರ ಮನೆಯಲ್ಲಿ ಊಟ ಇರುತಿತ್ತು, ಊಟದ ರುಚಿ ಮತ್ತು ಜೊತೆಗಿದ್ದ ಪ್ರೀತಿ ಬಗ್ಗೆ ನೆನಪು ಮಾಡಿಕೊಂಡಾಗ ರಾಮ ಭಟ್ಟರಿಗೆ ರಾಮ ಭಟ್ಟರು ಮಾತ್ರ ಹೋಲಿಕೆಯಾಗಬಲ್ಲರು ಎಂದೆನಿಸುತ್ತದೆ.

ಅಂಬುತೀರ್ಥ ಅಭಿವೃದ್ಧಿ ಆಗಬೇಕು ಎಂದು ಅದೇಕೋ ಅವರಾಗೆ ಮನಸ್ಸಿಗೆ ತಂದುಕೊಂಡು ನಮ್ಮೆಲ್ಲರಲ್ಲಿ ಅಭಿಪ್ರಾಯ ಹಂಚಿಕೊಂಡರು,
ಅವರ ಪ್ರಭಾವ ಎಷ್ಟಿತ್ತೆಂದರೆ ಅವರ ಅಪೇಕ್ಷೆ ತಿಳಿದ ಶಿವಮೊಗ್ಗ ಜಿಲ್ಲೆಯ ಪ್ರಮುಖರು ಸೇರಿ 6 ಕೋಟಿ ರೂಪಾಯಿಗಳನ್ನು ವಿವಿಧ ಇಲಾಖೆಗಳಿಂದ ಮಂಜೂರು ಮಾಡಿಸಿದೆವು.

ಇವತ್ತು ಶರಾವತಿ ಉಗಮ ಸ್ಥಾನ ಹೊಸ ರೂಪ ಪಡೆದುಕೊಂಡಿದೆ,
ಇದರ ಹಿಂದೆ ಇದ್ದಿದ್ದು ರಾಮ ಭಟ್ಟರ ಅಪೇಕ್ಷೆಯೇ ಹೊರತು, ಜನಪ್ರತಿನಿಧಿಗಳ ಹೆಚ್ಚುಗಾರಿಕೆ ಅಂತ ನನಗೇನೂ ಅನಿಸುವುದಿಲ್ಲ.

ಸಂಘದ ಸ್ವಯಂ ಸೇವಕರಾಗಿ, ರವೀಂದ್ರ ನಗರ ಗಣಪತಿ ದೇವಸ್ಥಾನದ ಜನರ ಪ್ರೀತಿಯ ಭಕ್ತಿಯ ಅರ್ಚಕರಾಗಿ, ಶಿವಮೊಗ್ಗ ನಗರದ ಜನಸಾಮಾನ್ಯರ ಜೊತೆಗೆ, ಪ್ರಭಾವಿ ವ್ಯಕ್ತಿಗಳಿಗೂ ಅಚ್ಚುಮೆಚ್ಚಿನ ಗುರುಗಳಾಗಿ ಸಾವಿರಾರು ಜನರ ಅದರಲ್ಲೂ ಬಡವರ ಪುರೋಹಿತರಾಗಿ ಬದುಕಿ ಬಾಳಿದ ಅ ಪ ರಾಮಭಟ್ಟರ ಅಗಲಿಕೆಯ ಈ ದಿನ ನನಗಂತೂ ಹೆಚ್ಚು ದುಖಃದ ದಿನ ಎಂದರೆ ಅತಿಶಯೋಕ್ತಿಯಲ್ಲ.

ಕಳೆದವಾರದ ಅಧಿವೇಶನ ಮುಗಿಸಿದವನೇ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಟರನ್ನು ನೋಡಲು ಕಳೆದ ಶುಕ್ರವಾರ ಸಂಜೆ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಹೋಗಿ ರಾತ್ರಿ 8 ಘಂಟೆ ಸುಮಾರಿಗೆ ನೋಡಿ ಮಾತನಾಡಿಸಿ ಬಂದಿದ್ದೆ ಇಂದು ಅವರಿಲ್ಲಾ ಎನ್ನುವುದು ನಂಬಲಾಗುತ್ತಿಲ್ಲಾ.

ಒಳ್ಳೆಯವರನ್ನು ಭಗವಂತ ಬೇಗ ತನ್ನ ಬಳಿ ಕರೆದುಕೊಳ್ಳುತ್ತಾನೆ, ಎನ್ನುವ ಮಾತು ಮತ್ತೊಮ್ಮೆ ಸತ್ಯವಾಯಿತು ಎಂದಷ್ಟೆ ಹೇಳಬಹುದು.

ಅವರ ಆತ್ಮಕ್ಕೆ ಶಾಂತಿ ದೊರಕಲಿ
ಅವರ ಕುಟುಂಬಕ್ಕೆ ಭಕ್ತರಿಗೆ ದುಖಃ ಭರಿಸುವ ಶಕ್ತಿ ಭಗವಂತ ಕೊಡಲಿ ಎಂದು ಆಶಿಸುತ್ತೇನೆ.