ಅರಿವು-ಶಾಂತಿ-ಸಾಮರಸ್ಯದ ದಿನವನ್ನು ರೋಟರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿದ್ದು, ನಮ್ಮ ಪೂರ್ವಜರು ಹೇಳಿದ “ವಸುದೇವ ಕುಟುಂಬಕಃ” ಪಾಲಿಸಿದಾಗ ಮಾತ್ರ ವಿಶ್ವ ಶಾಂತಿ ಹೊಂದಲು ಸಾಧ್ಯ ಎಂದು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು.

ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಹಾಗೂ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶತಮಾನಗಳ ಹಿಂದೆಯ “ಕಾಯಕವೇ ಕೈಲಾಸ” ಎಂದು ಹೇಳಿದ ಎಲ್ಲ ಮಹನಿಯರ ಮಾತು ಇಂದಿಗೂ ಪ್ರಸ್ತುತ. ಮಹನೀಯರ ಹೊರತುಪಡಿಸಿ ಇನ್ನುಳಿದ ಜನರನ್ನು ಎಲ್ಲರೂ ಮರೆತುಹೋಗಿದ್ದಾರೆ. ಕಾರಣ ಸ್ವಾರ್ಥಿಯಾದವರನ್ನು ಎಲ್ಲರೂ ಮರೆಯುತ್ತಾರೆ. ರೋಟರಿ ಜನ್ಮ ದಿನವನ್ನು ವಿಶ್ವ ಅರಿವಿನ ದಿನವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕನ್ನಡದ ಹಲವಾರು ಕವಿತೆಗಳನ್ನು ಉದಾಹರಿಸಿ, ಎಲ್ಲರೂ ನಿಸ್ವಾರ್ಥದಿಂದ ಸೇವೆ ಮಾಡಿದಾಗ ಮಾತ್ರ ಸರ್ವರೂ ಸಮೃದ್ಧಿಯಿಂದ ಬದುಕು ಸಾಗಿಸಲು ಸಾಧ್ಯ.. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಹಲವಾರು ಕಾರ್ಯಕ್ರಮ ಹಾಕಿಕೊಂಡು ಸೇವಾ ಚಟುವಟಿಕೆ ನಡೆಸುವ ಮೂಲಕ ಮನೆ ಮಾತಾಗಿದೆ ಎಂದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷ ಎನ್.ಜೆ.ಸುರೇಶ್ ಮಾತನಾಡಿ, ಜನಸಾಮಾನ್ಯರನ್ನು ಕಾಡುತ್ತಿದ್ದ ಮಾರಕ ಕಾಯಿಲೆಗಳನ್ನು ವಿಶ್ವದಿಂದ ಹೊಡೆದೊಡಿಸಿದ ಯಶಸ್ಸು ರೋಟರಿ ಸಂಸ್ಥೆಗೆ ಇದೆ. ಇದರಿಂದ ಶಾಂತಿಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ರೋಟರಿ ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಂಸ್ಥೆಯು ಪ್ರಾರಂಭಗೊಂಡ ಕೊಠಡಿ ಚಿಕಾಗೊದಲ್ಲಿ ಇಂದಿಗೂ ಯಾತ್ರಾಸ್ಥಳದಂತೆ ಕಂಗೊಳಿಸುತ್ತಿದೆ. ಸೇವಾ ಕಾರ್ಯಗಳಲ್ಲಿ ರೋಟರಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ರೋಟರಿ ವಲಯ 10ರ ಸಹಾಯಕ ಗವರ್ನರ್ ಸುನೀತಾ ಶ್ರೀಧರ್, ದೇವೇಂದ್ರಪ್ಪ, ವೀಣಾ ಸುರೇಶ್, ಮಂಜುಳಾ ರಾಜು, ಎನ್.ವಿ.ಭಟ್, ರೇವಣಸಿದ್ದಪ್ಪ, ಸುಮತಿ, ಚಂದ್ರು, ಜಗದೀಶ್ ಸರ್ಜ, ಜಿ.ವಿಜಯ್ ಕುಮಾರ್, ಮಾಜಿ ಜಿಲ್ಲಾ ರಾಜಪಾಲ ಪ್ರೊ. ಎ.ಎಸ್.ಚಂದ್ರಶೇಖರ್, ಎಂ.ಜಿ.ರಾಮಚಂದ್ರಮೂರ್ತಿ, ಆನಂದ ಮೂರ್ತಿ, ಎಲ್ಲ ಕ್ಲಬ್ ಅಧ್ಯಕ್ಷರು ಹಾಗೂ ನಗರದ ಎಲ್ಲ ಎಂಟು ಕ್ಲಬ್‌ಗಳ ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…