
ಶಿವಮೊಗ್ಗ: ಯೋಗವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮಲ್ಲಿನ ಮನೋಸಾಮಾರ್ಥ್ಯ ವೃದ್ಧಿಯಾಗುತ್ತದೆ ಎಂದು ಶ್ರೀ ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಹೇಳಿದರು.
ಕೃಷಿ ನಗರದ ರೋಟರಿ ರಿವರ್‌ಸೈಡ್ ಭವನದಲ್ಲಿ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವಿಶ್ವದ ಎಲ್ಲ ದೇಶಗಳಲ್ಲಿಯೂ ಯೋಗದ ಮಹತ್ವ ಅರಿತುಕೊಂಡು ಬಹುತೇಕರು ಯೋಗ ಅಭ್ಯಾಸ ಮಾಡುವ ಜತೆಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಯೋಗದಿಂದ ಆಗುವ ಧನಾತ್ಮಕ ಪರಿಣಾಮಗಳ ಬಗ್ಗೆ ತಿಳವಳಿಕೆ ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ದೀರ್ಘಕಾಲ ನೆಮ್ಮದಿಯಾದ ಜೀವನ ನಡೆಸಲು ಆರೋಗ್ಯ ಅತ್ಯಂತ ಮುಖ್ಯ. ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಯೋಗ ಪ್ರಮುಖ ಮಾರ್ಗವಾಗಿದೆ. ಉತ್ಸಾಹದಿಂದ ಜೀವನ ನಡೆಸಲು ಯೋಗ ಸಹಕಾರಿ ಆಗುತ್ತದೆ. ಬಹುತೇಕ ಕಾಯಿಲೆಗಳಿಗೆ ಯೋಗ ಅಭ್ಯಾಸದ ಮೂಲಕ ಪರಿಹಾರವಿದೆ ಎಂದರು.
ಶಿವಮೊಗ್ಗ ನಗರದ 30 ಕಡೆಗಳಲ್ಲಿ ಶಿವಗಂಗಾ ಯೋಗಕೇಂದ್ರದಿAದ ಉಚಿತ ಯೋಗ, ಪ್ರಾಣಾಯಾಮ, ಧ್ಯಾನ ತರಗತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಜನರು ಯೋಗ ತರಗತಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗಕೇಂದ್ರದಲ್ಲಿ ಧ್ಯಾನಮೂರ್ತಿ ಶಿವನ ವಿಗ್ರಹಕ್ಕೆ ದೇಣಿಗೆ ನೀಡಿದ ಯೋಗ ಕಲಿಕಾರ್ಥಿಗಳಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಯೋಗ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಯೋಗವನ್ನು ಮನೆ ಮನೆಗಳಿಗೆ ತಲುಪಿಸುವಲ್ಲಿ ಶಿವಗಂಗಾ ಯೋಗಕೇಂದ್ರ ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಯೋಗಶಿಕ್ಷಕ ಮಹಾಬಲೇಶ ಹೆಗಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ನೀಲಕಂಠರಾವ್, ನಾಗರತ್ನಮ್ಮ ಚಂದ್ರಶೇಖರ್, ಮಹೇಶ್ವರಪ್ಪ, ರವಿಕುಮಾರ್, ಡಾ. ನಂದಿನಿ, ಬಸವರಾಜ್, ಜಿ.ವಿಜಯ್‌ಕುಮಾರ್, ವಿಜಯಲಕ್ಷಿö್ಮÃ ಪಾಟೀಲ್, ಬಿಂದು ವಿಜಯ್‌ಕುಮಾರ್ ಉಪಸ್ಥಿತರಿದ್ದರು.