ಪ್ರತಿಯೊಬ್ಬ ಪೋಷಕರು ನನಗೆ ಬಂದ ಕಷ್ಟ ನನ್ನ ಮಕ್ಕಳಿಗೆ ಬರುವುದು ಬೇಡ ಎಂದು ಯೋಚನೆ ಮಾಡುತ್ತಾರೆ. ಆದರೆ ಇದು ಪೋಷಕರು ಇಡುವ ತಪ್ಪು ಹೆಜ್ಜೆಯಾಗಿದ್ದು ಮಕ್ಕಳಿಗೆ ನಮ್ಮ ಪ್ರತಿಯೊಂದು ಕಷ್ಟದ ಬಗ್ಗೆ ಅರಿವು ಮೂಡಿಸಬೇಕು ಎಂದು ಮಾಜಿ ಸೂಡಾ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಸಲಹೆ ನೀಡಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಎಲ್.ಜಿ. ಇಂಟರ್ ನ್ಯಾಷನಲ್ ಸ್ಕೂಲ್ ಹಮ್ಮಿಕೊಂಡಿದ್ದ ತನ್ನ 3ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಉದ್ಘಾಟಕರಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಬೆಳೆದಂತೆ ಮಕ್ಕಳು ಹೆಚ್ಚು ಹೆಚ್ಚು ಮೊಬೈಲ್ ಬಳಕೆ ಮಾಡುವ ಮೂಲಕ ತಮ್ಮ ಮಾನಸಿಕ ಒತ್ತಡ ಹಿಡಿದಿಟ್ಟುಕೊಳ್ಳಲು ಹಿಂದೆ ಬೀಳುತ್ತಿದ್ದಾರೆ ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡಬೇಕು, Covid-19 ಸಂದರ್ಭದಲ್ಲಿ ಅನಿವಾರ್ಯವಾಗಿ ಅನ್ ಲೈನ್ ತರಗತಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಬೇಕಾಗಿತ್ತು ಆದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು ಸಾಧ್ಯವಾದಷ್ಟು ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕಿವಿ ಮಾತು ಹೇಳಿದರು.
ಇತ್ತಿಚಿನ ದಿನಗಳಲ್ಲಿ ಪೋಷಕರು ಕೂಡ ಧಾರಾವಾಹಿಯ ಗಿಳಿಗೆ ಮಾರುಹೋಗಿದ್ದು, ಇದರಿಂದ ಹೊರ ಬಂದು ಮಕ್ಕಳ ಭವಿಷ್ಯದ ಕುರಿತು ಹೆಚ್ಚು ಚಿಂತಿಸಬೇಕು ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆಚರಣೆ ಬಗ್ಗೆ ಅವರಲ್ಲಿ ಹೆಚ್ಚಿನ ಜ್ಞಾನ ಬಿತ್ತಬೇಕು ಎಂದು ಕರೆ ನೀಡಿದರು.
ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು, ಮಕ್ಕಳು ಕಾಣುವ ಕನಸನ್ನು ನನಸು ಮಾಡುವ ಕೆಲಸ ಪೋಷಕರು ಮಾಡಬೇಕೆ ಹೊರತು ನಮ್ಮ ಇಷ್ಟದ ಅನುಸಾರ ಅವರು ಓದಬೇಕು ಎಂದು ಒತ್ತಡ ತರಬಾರದು ಎಂದು ಹೇಳಿದರು.
ಈ ಸಮಯದಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ಬಸವರಾಜಪ್ಪ ಅವರು, ಶಾಲಾ ಮಾಲೀಕರಾದ ಶ್ರೀ ರುದ್ರೇಶ್ ಅವರು, ಪ್ರಮುಖರಾದ ಶ್ರೀಮತಿ ಇಂಪನಾ ರುದ್ರೇಶ್ ಅವರು, ಶ್ರೀ ಪ್ರಕಾಶ್ ಅವರು ಹಾಗೂ ಶ್ರೀ ಪೃಥ್ವಿ ಅವರು ಉಪಸ್ಥಿತರಿದ್ದರು.