ಶಿವಮೊಗ್ಗ: 2025ಕ್ಕೆ ಮಲೇರಿಯಾ, ಕ್ಷಯ ಹಾಗೂ ಅನಿಮಿಯ ಮುಕ್ತ ಭಾರತಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳ ನೆರವು ಅತ್ಯಂತ ಅಗತ್ಯ ಎಂದು ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದಲ್ಲಿರುವ ಸ್ಕೌಟ್ ಭವನದಲ್ಲಿ ವಿವಿಧ ಪ್ರೌಢಶಾಲೆಯ ಗೈಡ್ಸ್ ಮಕ್ಕಳಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಮಾಹಿತಿ ಹಾಗೂ ಜಂತುಹುಳ ನಿವರಣಾ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅದ್ಭುತ ಯೋಜನೆ ಸಾಕಾರಕ್ಕೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನೀರಿಕ್ಷಕ ಎಂ.ಎ.ಅತ್ತರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಾಮುಖ್ಯತೆ ನೀಡಬೇಕು. ಆರೋಗ್ಯ ಸದೃಢವಾಗಿದ್ದರೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಸಹಕಾರಿ ಆಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದರು.

ಅನಿಮಿಯದಿಂದ ಸಾಕಷ್ಟು ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಅಸಾಂಕ್ರಾಮಿಕ ರೋಗಗಳಿಗೆ ಹೃದಯಾಘಾತ, ಕಿಡ್ನಿ ವೈಫಲ್ಯ, ದೃಷ್ಠಿ ಹೀನತೆ, ಗ್ಯಾಂಗ್ರೀನ್, ರೋಗನಿರೋಧಕ ಶಕ್ತಿ ಕುಂದುವುದು, ಲೈಂಗಿಕ ದೌರ್ಬಲ್ಯ ಉಂಟಾಗಬಹುದು ಎಂದು ತಿಳಿಸಿದರು.
ತಾಲೂಕು ಹಿರಿಯ ಆರೋಗ್ಯ ನೀರಿಕ್ಷಕ ಎಸ್,ಆರ್.ಮಂಜುನಾಥ್ ಮಾತನಾಡಿ, ಕುಷ್ಠರೋಗದ ಅರಿವು ಮತ್ತು ಕ್ಷಯರೋಗದ ಲಕ್ಷಣಗಳು, ಪರಿಹಾರದ ಬಗ್ಗೆ ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿದರು. ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಪ್ರತಿ ವರ್ಷ ಆರೋಗ್ಯ ಇಲಾಖೆಯ ಸೇವೆ ನಾವು ಮರೆಯುವಂತಿಲ್ಲ. ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಸಹಕಾರ ನೀಡುತ್ತ ಬಂದಿದ್ದಾರೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕಬ್ಬಿಣಾಂಶ ಇರುವ ಮಾತ್ರೆಗಳನ್ನು ವಿತರಿಸಲಾಯಿತು. ಜಂತುಹುಳ ನಿವಾರಣಾ ಮಾತ್ರೆಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ರಾಜ್ಯ ಸಂಘಟನಾ ಆಯುಕ್ತ ಭಾರತಿ ಡಯಾಸ್, ಜಿ.ವಿಜಯ್‌ಕುಮಾರ್, ಮಂಜುನಾಥ, ಅತ್ತರ್, ದೇವಪ್ಪ, ರುಕ್ಸಾನಾ, ಭರತ್ ಹಾಗೂ ವಿವಿಧ ಶಾಲೆಯಿಂದ ಆಗಮಿಸಿದ್ದ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ ಪ್ರಜಾ ಶಕ್ತಿ…