ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದೆಲ್ಲೆಡೆ ಹೆಚ್ಚಾಗಿರುವ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕಾ ಕಾರ್ಯಕ್ರಮಗಳನ್ನು ಮಾರ್ಚ್ 04 ರಿಂದ ಆರು ತಿಂಗಳವರೆಗೆ ಪ್ರತಿ ಭಾನುವಾರದಂದು ನಗರದ ರಾಜೀವ್‍ಗಾಂಧಿ ಬಡಾವಣೆಯಲ್ಲಿರುವ ಮಹಾವೀರ್ ಗೋಶಾಲೆಯ ಪಕ್ಕದಲ್ಲಿ ಆಯೋಜಿಸಿದೆ.
ಮಾನವೀಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ಶ್ವಾನಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು, ರೇಬಿಸ್, ಲೆಪ್ಟೋಸ್ಟೈರಾ ಇತ್ಯಾದಿ ಪ್ರಾಣಿ ಜನ್ಯ ರೋಗಗಳಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವುದು ಹಾಗೂ ಬೀದಿನಾಯಿಗಳಿಂದ ಸಾರ್ವಜನಿಕರಿಗಾಗುವ ತೊಂದರೆಗಳಿಂದ ಮುಕ್ತಗೊಳಿಸುವುದು.
ಈ ಶಸ್ತ್ರಚಿಕಿತ್ಸೆಯ ಉದ್ದೇಶವಾಗಿದ್ದು, ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ರೇಬಿಸ್ ವಿರುದ್ಧ ಲಸಿಕೆ ಹಾಕಿ ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಪೂರ್ಣವಾದ ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲಿ ಬಿಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಯುತ ಮಾಯಣ್ಣ ಗೌಡ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಡಾ|| ರೇಖಾ ಎಸ್.ಟಿ., ಪಶುವೈದ್ಯಾಧಿಕಾರಿಗಳು, ಮಹಾನಗರ ಪಾಲಿಕೆ- 9886326268 ಹಾಗೂ ಬಸವಪ್ರಸಾದ್ (ಎಸ್‍ಎಆರ್ ಸಿ) -9964289695 ಇವರುಗಳನ್ನು ಸಂಪರ್ಕಿಸುವುದು.