ಶಿವಮೊಗ್ಗ: ಸಮಾಜದಲ್ಲಿ ವೈದ್ಯರ ಸೇವೆ ತುಂಬಾ ಮಹತ್ತರವಾಗಿದ್ದು, ನಿರಂತರವಾಗಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವ ವೈದ್ಯರ ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಹಿರೇಮಠ್ ಹೇಳಿದರು.
ಅಂತರಾಷ್ಟ್ರೀಯ ದಂತ ವೈದ್ಯರ ದಿನಾಚರಣೆ ಪ್ರಯುಕ್ತ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯ ನಿಯೋಜಿತ ಅಧ್ಯಕ್ಷ ಡಾ. ಭರತ್ ಅವರಿಗೆ ಸನ್ಮಾನಿಸಿ ಮಾತನಾಡಿದರು.
ವೈದ್ಯರು ವೃತ್ತಿಯ ಜತೆಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಸಾರ್ವಜನಿಕರ ಆರೋಗ್ಯ ಶಿಬಿರಗಳಲ್ಲಿ ಸೇವೆ ಒದಗಿಸುತ್ತಾರೆ. ಸಾರ್ವಜನಿಕರ ಸೇವೆಯಲ್ಲಿ ಗುರುತಿಸಿಕೊಂಡಿರುವ ವೈದ್ಯರ ಸೇವೆ ಗುರುತಿಸಿ ಜೆಸಿಐ ಗೌರವಿಸುವ ಕೆಲಸ ನಡೆಸುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ದಂತ ವೈದ್ಯರ ದಿನಾಚರಣೆಯ ಮಹತ್ವ ತಿಳಿಸಿದರು. ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ವೈದ್ಯರ ಕೊಡುಗೆ ಅಪಾರ ಎಂದು ಹೇಳಿದರು.
ಇದೇ ಸಂದರ್ಭದಲಿ ಭಾರತ ದಂತ ವೈದ್ಯಕೀಯ ಸಂಘದ ರಾಜ್ಯ ನಿಯೋಜಿತ ಅಧ್ಯಕ್ಷ ಡಾ. ಭರತ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಆಗಿದ್ದು, ತಂತ್ರಜ್ಞಾನದ ನೆರವಿನಿಂದ ಪರಿಣಾಮಕಾರಿ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗುತ್ತಿದೆ. ಉತ್ತಮ ಆರೋಗ್ಯ ಸೇವೆ ಜನರಿಗೆ ನೀಡಬಹುದಾಗಿದೆ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ, ಜೆಸಿಐ ಸಂತೋಷ್, ಕಿಶೋರ್, ಸತೀಶ್‌ಚಂದ್ರ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.