ಶಿವಮೊಗ್ಗ: ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ ಕೆಲಸವಾಗಿದ್ದು, ರಕ್ತದಾನ ಮಾಡುವುದರಿಂದ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಸೇವೆ ಸಲ್ಲಿಸಿದಂತಾಗುತ್ತದೆ. ಕಾಲ ಕಾಲಕ್ಕೆ ರಕ್ತದಾನದ ಅಭ್ಯಾಸ ಮಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮೆಗ್ಗಾನ್ ಭೋದನಾ ಜಿಲ್ಲಾ ಆಸ್ಪತ್ರೆಯ ರಕ್ತಕೇಂದ್ರದ ವೈದ್ಯೆ ಡಾ. ವೀಣಾ ಹೇಮಂತ್ ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಒಕ್ಕಲಿಗರ ವೇದಿಕೆ ವತಿಯಿಂದ ಪಂಪಾ ನಗರದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಹಾಗೂ ನೇತ್ರದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಾಂಶ ಕಡಿಮೆಯಾಗಿ ಉತ್ತಮ ಆರೋಗ್ಯ ಹೊಂದಲು ಸಹಕಾರಿ ಆಗುತ್ತದೆ. ರಕ್ತದಾನದಿಂದ ಹೃದಯಾಘಾತ ಸಂಭವ ಕಡಿಮೆ ಹಾಗೂ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇತರರ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಸುಪ್ರಿಯಾ ರಾಮಪ್ಪ ಮಾತನಾಡಿ, ಪ್ರತಿಯೊಬ್ಬರು ನೇತ್ರದಾನ ಮಾಡುವ ಸಂಕಲ್ಪ ಮಾಡಬೇಕು. ಇದರಿಂದ ಇನ್ನೊಬ್ಬರ ಬದುಕಿಗೆ ಬೆಳಕು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನೇತ್ರದಾನ ಮತ್ತು ರಕ್ತದಾನದ ಜಾಗೃತಿ ಮೂಡಿಸುವ ಮೂಲಕ ಆಚರಿಸುತ್ತಿರುವುದು ಅತ್ಯಂತ ಅಭಿನಂದನೀಯ. ಯುವಜನತೆ ಕಾಲ ಕಾಲಕ್ಕೆ ರಕ್ತದಾನ ಮಾಡಬೇಕು ಎಂದು ತಿಳಿಸಿದರು.

ಕಾರ್ಯದರ್ಶಿ ರಚನಾ ಸಂತೋಷ್, ಖಜಾಂಚಿ ಮಹಿಮಾ ಪ್ರಶಾಂತ್, ಗೌರವಾಧ್ಯಕ್ಷೆ ಅಂಜು ಸುರೇಶ್, ಶೃತಿ ಗೌತಮ್, ಅರ್ಚನಾ, ಸಿಂಧು ಕಿಶೋರ್, ಕಾವ್ಯಾ ಸತೀಶ್, ಜ್ಯೋತಿ ಸುಬ್ಬೇಗೌಡ, ಸುರಭಿ, ಶೈಲಾ ವಾಸುದೇವ್, ಛಾಯಾ ಜಯಂತ್, ರಚನಾ ಪ್ರೀತಮ್, ರಂಜಿತಾ ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಯೂನಿಟ್ ರಕ್ತದಾನ ಮಾಡಲಾಯಿತು.

ವರದಿ ಪ್ರಜಾ ಶಕ್ತಿ…