ಹೆಣ್ಣು ಮಕ್ಕಳು ಸ್ವಸ್ಥವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಆದ್ದರಿಂದ ವಿಶೇಷವಾಗಿ ಮಹಿಳೆಯರ ಆರೋಗ್ಯ ತಪಾಸಣೆಗಾಗಿ ಸರ್ಕಾರ ನೂತನವಾಗಿ ಆರಂಭಿಸಿರುವ ಆಯುಷ್ಮತಿ ಕ್ಲಿನಿಕ್‍ನ ಸದುಪಯೋಗವನ್ನು ಮಹಿಳೆಯರು ಪಡೆಯಬೇಕೆಂದು ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ತಿಳಿಸಿದರು.

ಸ್ವಸ್ಥ ಮಹಿಳೆಯರು-ಸ್ವಸ್ಥ ಸಮಾಜ ಘೋಷಣೆಯಡಿ ಸರ್ಕಾರ ಇಂದಿನಿಂದ ಆರಂಭಿಸಿರುವ ‘ಆಯುಷ್ಮತಿ ಕ್ಲಿನಿಕ್’ ಉದ್ಘಾಟನೆಯನ್ನು ತುಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನೆರವೇರಿಸಿ ಅವರು ಮಾತನಾಡಿದರು.
ಇಂದು ಅವಿಸ್ಮರಣೀಯ ಮತ್ತು ಐತಿಹಾಸಿಕ ದಿನವಾಗಿದೆ. ಯಾಕೆಂದರೆ ಸರ್ಕಾರ ವಿಶೇಷವಾಗಿ ಮಹಿಳೆಯರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ‘ಆಯಷ್ಮತಿ ಕ್ಲಿನಿಕ್’ ಯೋಜನೆ ಆರಂಭಿಸಿದೆ. ಇಡೀ ಸಂಸಾರದ ನಿರ್ವಹಣೆ ಮಾಡುವ ಹೆಣ್ಣುಮಕ್ಕಳ ಆರೋಗ್ಯದ ಕಡೆ ನಿರ್ಲಕ್ಷ್ಯ ಸಾಮಾನ್ಯವಾಗಿರುತ್ತದೆ. ಅದು ಸಲ್ಲದು. ಆದ್ದರಿಂದ ಮಹಿಳೆಯರು ಈ ಕ್ಲಿನಿಕ್‍ನ ಸದುಪಯೋಗ ಪಡೆಯಬೇಕು.
ಮಹಾತ್ಮಾಗಾಂಧೀಜಿಯವರು ಎಂದು ಆರೋಗ್ಯ ಮತ್ತು ಶಿಕ್ಷಣ ಮನೆ ಬಾಗಿಲಿಗೆ ಬರುತ್ತದೋ ಅಂದು ದೇಶ ರಾಮರಾಜ್ಯವಾಗುತ್ತದೆ ಎಂದಿದ್ದರು.

ಪ್ರಸ್ತುತ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ಸ್ವಾಭಿಮಾನದಿಂದ ಜೀವನ ನಡೆಸಲು ಶಿಕ್ಷಣ ಮತ್ತು ಆರೋಗ್ಯ ಸಹಕಾರಿಯಾಗಿದೆ. ಉತ್ತಮ ಮತ್ತು ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಲಭ್ಯವಾದಲ್ಲಿ ಪೋಷಕರು ನೆಮ್ಮದಿಯಿಂದ ಇರಬಹುದು ಎಂದರು.
ಈ ಆರೋಗ್ಯ ಯೋಜನೆ ಕುರಿತು ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತೆಯರು ಈ ಬಗ್ಗೆ ಸಮುದಾಯದಲ್ಲಿ ತಿಳಿಸಬೇಕು. ವೈದ್ಯರು, ಶುಶ್ರೂಷಕರು ಮತ್ತು ಆಶಾ ಕಾರ್ಯಕರ್ತೆಯರು ಕೋವಿಡ್ ಸೇರಿದಂತೆ ಎಂದಿಗೂ ಉತ್ತಮ ಸೇವೆ ನೀಡುತ್ತಾ ಬಂದಿದ್ದು, ಅವರಿಗೆ ನಾವೆಲ್ಲರೂ ಧನ್ಯರು.
ಸರ್ಕಾರದ ಕಿವಿ ಮತ್ತು ಕಣ್ಣುಗಳು ನೀವಾಗಬೇಕು. ಅಂದರೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ತೋರಿಸಿ, ಗಮನಕ್ಕೆ ತಂದಲ್ಲಿ ಉತ್ತಮವಾಗಿ ಸ್ಪಂದಿಸುತ್ತದೆ. ಈ ಯೋಜನೆ ಕೂಡ ಇಂತಹದ್ದೇ ಉದಾಹರಣೆಯಾಗಿದೆ. ಆಯುಷ್ಮತಿ ಕ್ಲಿನಿಕ್‍ಗಳಿಂದ ಜಿಲ್ಲಾಸ್ಪತ್ರೆ ಮತ್ತು ಇತರೆ ಆಸ್ಪತ್ರೆಗಳ ಹೊರೆ ಕಡಿಮೆಯಾಗಲಿದೆ ಎಂದ ಅವರು ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಿ ಆಯುಷ್ಮತಿ ಕ್ಲಿನಿಕ್‍ಗಳ ಸದುಪಯೋಗ ಪಡೆಯಬೇಕೆಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಇಂದು ಜಿಲ್ಲೆಯ ನಾಲ್ಕು ನಗರ ಪ್ರಾಥಮಿ ಆರೋಗ್ಯ ಕೇಂದ್ರಗಳಾದ ತುಂಗಾನಗರ, ಸೀಗೆಹಟ್ಟಿ, ಬೊಮ್ಮನಕಟ್ಟೆ ಮತ್ತು ಭದ್ರಾವತಿ ತಾಲ್ಲೂಕಿನ ಅಶ್ವಥನಗರಗಳಲ್ಲಿ ಮಹಿಳೆಯರ ಆಯುಷ್ಮತಿ ಕ್ಲಿನಿಕ್ ಆರಂಭಿಸಲಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಪ್ರತಿ ದಿನ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.
ಮಹಿಳೆಯರಿಗಾಗಿ ರೂಪುಗೊಂಡ ಈ ಕ್ಲಿನಿಕ್‍ನಲ್ಲಿ ಉಚಿತವಾಗಿ ತಪಾಸಣೆ, ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ ವಿತರಣೆ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಿದೆ. ಆಯುಷ್ಮತಿ ಕ್ಲಿನಿಕ್‍ಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಜನಸಂದಣಿ ಸಹ ಕಡಿಮೆ ಆಗಲಿದೆ.

ಕಾರ್ಯಕ್ರಮದಲ್ಲಿ ಆರ್‍ಸಿಹೆಚ್‍ಓ ಡಾ. ನಾಗರಾಜನಾಯ್ಕ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಗುಡುದಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಡಾ.ಹರ್ಷವರ್ಧನ್, ಡಾ.ಭೀಮಪ್ಪ, ಇತರೆ ತಜ್ಞ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ವರದಿ ಪ್ರಜಾ ಶಕ್ತಿ…