ಶಿವಮೊಗ್ಗ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ನಿಚ್ಚಳ ಬಹಮತ ಗಳಿಸಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಎಐಸಿಸಿ ಕಾರ್ಯದರ್ಶಿ ಶಿರಿವಳ್ಳಿ ಪ್ರಸಾದ್ ಹೇಳಿದರು.


ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದೆ. ಬಿಜೆಪಿಯ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಶೇ.೪೦ರ ಕಮಿಷನ್ ಸರ್ಕಾರವಿದು. ಇದರ ವಿರುದ್ಧ ಜನ ತಿರುಗಿ ಬೀಳಲಿದ್ದಾರೆ. ಕರ್ನಾಟಕವನ್ನು ಉಳಿಸಬೇಕೆಂಬುದೇ ಮತದಾರನ ಹೆಬ್ಬಯಕೆ ಆಗಿದ್ದು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ ಎಂದರು.
ಶಿವಮೊಗ್ಗದಲ್ಲಿ ಸ್ಪರ್ಧಿಸಿರುವ ಯೋಗೀಶ್ ಅವರಿಗೆ ಮೂರು ಬಾರಿ ಪಾಲಿಕೆ ಸದಸ್ಯರಾಗಿ ಆಡಳಿತದ ಅನುಭವವಿದೆ. ಯುವ ನಾಯಕರಾಗಿದ್ದಾರೆ. ಜೊತೆಗೆ ಈ ಬಾರಿ ಕೆ.ಎಸ್ ಈಶ್ವರಪ್ಪನವರು ಭಾಗವಹಿಸದೆ ಇರುವುದು ಹಾಗೂ ಜೆಡಿಎಸ್ ಅಭ್ಯರ್ಥಿ ದುರ್ಬಲ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಖಚಿತವಾಗಿದೆ. ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲೂ ಗೆಲ್ಲುವುದು ಖಚಿತ ಎಂದರು.


ಪಕ್ಷದ ವತಿಯಿಂದ ಈಗಾಗಲೇ ವಿತರಿಸಲಾಗಿರುವ ಗ್ಯಾರಂಟಿ ಕಾರ್ಡ್ ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯಲು ಕಾರಣವಾಗುತ್ತದೆ. ಪಕ್ಷ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ಗ್ಯಾರಂಟಿ ಕಾರ್ಡ್ನ ಯೋಜನೆಗೆ ಚಾಲನೆ ದೊರೆಯಲಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸಯ್ಯದ್ ಅಹ್ಮದ್ ಮಾತನಾಡಿ, ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಲಿದೆ. ಅದರಲ್ಲೂ ಶಿಕಾರಿಪುರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ. ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರ, ಶೇ.೪೦ರಷ್ಟು ಕಮಿಷನ್ ಇವೆಲ್ಲವೂ ಕಾಂಗ್ರೆಸ್ ಗೆಲುವಿಗೆ ಕಾರಣವಾಗುತ್ತವೆ. ಜೊತೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ ಎಂದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಟೇಕಾಫ್ ಆಗಿದೆ. ಪ್ರಚಾರದ ಅಬ್ಬರ ಹೆಚ್ಚುತ್ತಿದೆ. ಕಾಂಗ್ರೆಸ್ಸಿಗೆ ಎಲ್ಲಾ ಕಡೆಯಿಂದಲೂ ಒಲವು ಹರಿದು ಬರುತ್ತಿದೆ. ಪ್ರತಿ ಮನೆಗೂ ಗ್ಯಾರಂಟಿ ಕಾರ್ಡ್ ನೀಡಿದ್ಧೇವೆ. ಶಿವಮೊಗ್ಗ ಒಂದರಲ್ಲಿಯೇ ೪೬ ಸಾವಿರ ಕಾರ್ಡ್ ನೀಡಿದ್ದೇವೆ. ಇದು ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುತ್ತದೆ. ಜೊತೆಗೆ ಬಿಜೆಪಿಯ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲೂ ್ಲಕಾಂಗ್ರೆಸ್ ಜಯಗಳಿಸಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ, ಚಂದ್ರಶೇಖರ್, ಟಿ. ಕೃಷ್ಣಪ್ಪ, ಚಂದನ್, ತಿಮ್ಮರಾಜು, ಕಲೀಂ ಪಾಶಾ, ಸೌಗಂಧಿಕ ಸೇರಿದಂತೆ ಹಲವರಿದ್ದರು.

ವರದಿ ಪ್ರಜಾ ಶಕ್ತಿ…