ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿ ಹೆಚ್ಚು ಮಾದಕ ವಸ್ತುಗಳ ಮಾರಾಟ ಜಾಲ ನಡೆಯುತ್ತಿರುವ ಬಗ್ಗೆ ವರದಿ ಇದೆ ಎಂದು ಮ್ಯಾಕ್ಸ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ಅಫ್ತಾಬ್ ಅಹಮದ್ ಮಾಲ್ದಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಕುಂಸಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶಿವಮೊಗ್ಗ ರೋಟರಿ ಕ್ಲಬ್ ಹಾಗೂ ಇಂಟರಾಕ್ಟ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಮಾದಕ ವಸ್ತು ದುರ್ವ್ಯಸನ ಗುರುತಿಸುವುದು ಮತ್ತು ಪ್ರತಿರೋಧಿಸುವಿಕೆ – ನೀವು ಹೇಗೆ ದುರ್ವ್ಯಸನಕ್ಕೆ ಬಲಿಯಾಗಬಹುದು ಎಂಬುದನ್ನು ತಿಳಿದುಕೊಳ್ಳುವ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಲ್ಲಿ, ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದ್ದು, ಜಾಹಿರಾತುಗಳು ಹಾಗೂ ಸಿನಿಮಾಗಳಿಂದ ಮಾರು ಹೋಗುವ ವಯಸ್ಸಿನಲ್ಲಿ ಮಾದಕ ವಸ್ತುಗಳ ದಾಸರಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ. ಸಿನಿಮಾ ಹಾಗೂ ಜಾಹಿರಾತುಗಳಿಂದ ಮಾರು ಹೋಗಿ ಇಡೀ ಜೀವನ ಕಳೆದುಕೊಳ್ಳುವ ಭಯ ಆವರಿಸಿದೆ. ಅಲ್ಲಿ ತೋರಿಸುವ ಗ್ಲ್ಯಾಮರ್ ನಿಂದ ಮರುಳಾಗುವ ವಯಸ್ಸು ವಿದ್ಯಾರ್ಥಿಗಳದ್ದಾಗಿದ್ದು, ಇದರಿಂದ ಬಹಳ ಎಚ್ಚರವಾಗಿರಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಲ್ಲಿ ಬಹುಬೇಗ ಆಕರ್ಷಣಾ ಮನೋಭಾವವಿರುತ್ತದೆ. ಹೀಗಾಗಿ, ಆಕರ್ಷಣೆಯ ವಸ್ತುಗಳಿಗೆ ಮಾರು ಹೋಗುವುದು ಸಹಜವಾಗಿದ್ದು, ಇದೆಲ್ಲವನ್ನು ವಿದ್ಯಾರ್ಥಿಗಳು ಜೀವನದ ಮೌಲ್ಯವನ್ನು ಅರಿತು, ನಿಗ್ರಹಿಸಬೇಕೆಂದು ಹೇಳಿದರು. ಹಣದ ಆಮೀಷಕ್ಕೆ ಬಲಿಯಾಗಿಯೂ ಅಮಲು ಪದಾರ್ಥಗಳ ದಾಸರಾಗುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗಬೇಡಿ ಎಂದು ಸಹ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿದ್ದ ಕೆಲವು ಗೊಂದಲ ಹಾಗೂ ಪ್ರಶ್ನೆಗಳನ್ನು ಪರಿಹರಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ಸೆಂಥಿಲ್ ವೇಲನ್ ಮಾತನಾಡಿದರು. ಮಾದಕ ವ್ಯಸನದ ಅಪಾಯಗಳ ಬಗ್ಗೆ ಮತ್ತು ವ್ಯಕ್ತಿಗಳು ಮತ್ತು ಸಮಾಜಗಳು ಜಾಗೃತಗೊಳ್ಳುವ ಅಗತ್ಯವಿದೆ ಎಂದರು. ಮಾದಕ ದ್ರವ್ಯ-ಸಂಬಂಧಿತ ಸಮಸ್ಯೆಗಳನ್ನು ಹೇಗೆ ಜಯಿಸಬಹುದು ಎಂಬುದರ ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಚಾರಗಳು ಮತ್ತು ಕಾರ್ಯಕ್ರಮಗಳನ್ನು ನಮ್ಮ ರೋಟರಿ ಸಂಸ್ಥೆವತಿಯಿಂದ ಮಾಡಲಾಗುತ್ತಿದೆ ಎಂದರು. ಡ್ರಗ್ಸ್ ಮತ್ತು ಅವುಗಳ ಪರಿಣಾಮಗಳ ಅರಿವು ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿರಬೇಕು. ಈ ನಿಟ್ಟಿನಲ್ಲಿ ರೋಟರಿ ಅರಿವು ಮೂಡಿಸಲಾಗುತ್ತಿದೆ. ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಕಾಡುವ ಈ ಸಮಸ್ಯೆಗಳನ್ನು ತಮ್ಮ ಪೋಷಕರ ಜೊತೆ ಚರ್ಚಿಸಿ ಪರಿಹರಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎನ್.ವಿ. ಭಟ್, ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ಟಿಕೆಎಂ ಭಟ್, ಅಧ್ಯಾಪಕರಾದ ನಾಗರತ್ನ ಸಿ.ಎಸ್. ಅಮೃತ, ಡಿ. ರವಿಚಂದ್ರ, ಸೇರಿದಂತೆ ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ. ಅರವಿಂದ್ ಕುಮಾರ್ ವಹಿಸಿದ್ದರು.

ವರದಿ ಪ್ರಜಾಶಕ್ತಿ…