ಶಿವಮೊಗ್ಗ : ಕರ್ನಾಟಕ ರಾಜ್ಯ ಪೂರಕ ಆರೋಗ್ಯ ವಿಜ್ಞಾನಗಳ ವೃತ್ತಿಪರರ ಸಂಸ್ಥೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಗದೊಂದಿಗೆ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ಪೂರಕ ಆರೋಗ್ಯ ವಿಜ್ಞಾನ ವಿಭಾಗವು ಕಲಿಕಾ ನ್ಯೂನ್ಯತೆ : ತಪಾಸಣೆ ಮತ್ತು ನಿರ್ವಹಣೆ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು ಆಯೋಜಿಸಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ.ಎ.ಪೈ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಕಲಿಕಾ ನ್ಯೂನತೆಯಿರುವ ಮಕ್ಕಳಿಗೆ ಸಂಪನ್ಮೂಲಗಳನ್ನು ಕಲ್ಪಿಸುವ ಅವಶ್ಯಕತೆಯಿದೆ ಹಾಗೂ ಇಂತಹ ಸಂಸ್ಥೆಗಳು ಎದುರಿಸುವ ಸವಾಲುಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಕಟೀಲ್ ಅಶೋಕ್ ಪೈ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಪುಷ್ಪಲತಾ.ಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಸುಧಾರಿತ ಸೇವೆಗಳಿಗೆ ತರಬೇತಿ ಮತ್ತು ಉನ್ನತೀಕರಣವು ಪ್ರಮುಖವಾಗಿದೆ ಹಾಗೂ ಪ್ರಾಯೋಗಿಕ ತರಬೇತಿ ಮತ್ತು ಕೌಶಲ್ಯವು ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಸೇವೆಗಳಿಗೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯು ತನ್ನ ಪ್ರಾರಂಭ ಕಾಲದಿಂದಲೂ ಮಾನಸಿಕ ಆರೋಗ್ಯ ಶಿಕ್ಷಣಕ್ಕಾಗಿ ಪ್ರಧಾನ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಮಾನಸಿಕ ಆರೋಗ್ಯ ವೃತ್ತಿಪರರಿಗೆ ನಿರಂತರ ಶಿಕ್ಷಣ ಮತ್ತು ನುರಿತ ತರಬೇತಿ ಅಗತ್ಯವೆಂದು ಹೇಳಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾದ ಡಿ ಹೆಚ್ ಓ ಮಾನಸಿಕ ಆರೋಗ್ಯದ ಜಿಲ್ಲಾ ಕಾರ್ಯಕ್ರಮಾಧಿಕಾರಿಯಾದ ಡಾ.ಕಿರಣ್ ರವರು ಮಾತನಾಡಿ ಮಾನಸಿಕ ಕಾಯಿಲೆಗೆ ಒಳಗಾಗಿರುವವರ ಸಂಖ್ಯೆ ಹಾಗೂ ಮಾನಸಿಕ ಆರೋಗ್ಯವನ್ನು ನಿರ್ವಹಣೆ ಮಾಡುವವರ ನಡುವಿನ ಅಂತರವು ಬಹಳಷ್ಟಿದೆ ಹಾಗೂ ಕೇವಲ ಬೆರಳೆಣಿಕೆಯಷ್ಟು ಮಾನಸಿಕ ಕಾಯಿಲೆಗಳಷ್ಟೇ ಆಸ್ಪತ್ರೆಗಳಲ್ಲಿ ಗುರುತಿಸಲಾಗುತ್ತಿದೆ. ಇನ್ನಿತರ ಬಹಳಷ್ಟು ಮಾನಸಿಕ ಕಾಯಿಲೆಗಳು ಬೆಳಕಿಗೆ ಬರುತ್ತಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಲು ಖಾಸಗಿ ಹಾಗೂ ಸರ್ಕಾರಿ ಶಾಖೆಗಳು ಒಟ್ಟಾಗಿ ಸೇರಿ ವೃತ್ತಿ ಪರರಿಗೆ ಈ ರೀತಿಯ ಇನ್ನಷ್ಟು ಕೌಶಲ್ಯಾಭಿವೃದ್ಧಿ ಕಾರ್ಯಗಾರವನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಸಿಸ್ಟರ್ ಮಾರಿ ಇವ್ಲಿನ್, ಕಟೀಲ್ ಅಶೋಕ್ ಪೈ ಪೂರಕ ಅರೋಗ್ಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರುಗಳಾದ ಹೆಚ್.ಎಂ.ರಕ್ಷಿತ್, ಕಾರ್ಯಕ್ರಮದ ಸಂಯೋಜಕ ಕಾರ್ಯದರ್ಶಿಯಾದ ಶ್ರೀ ದೇವಿ ಹಾಗೂ ಜಂಟಿ ಕಾರ್ಯದರ್ಶಿಯಾದ ಅನನ್ಯ, ಸಂಯೋಜಕ ಸಮಿತಿಯ ಸದಸ್ಯರಾದ ಹಾಗೂ ಎಂಫಿಲ್ ನಾ ಪ್ರಶಿಕ್ಷಣಾರ್ಥಿಗಳಾದ ಅನುಪಮಾ ಹಾಗೂ ಕೆ.ಟಿ.ಶ್ವೇತಾ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ