ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಕಟವಾದ ಕಾರಣ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಕಾರ್ಯ ಮತ್ತು ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.


ಭಾರತ ಸರ್ಕಾರ ಹಾಗೂ ವಿಶ್ವ ಸಂಸ್ಥೆಯು ಅನುಮೋದಿತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರ ಡಿಸೆಂಬರ್ 11 ರಂದು ಒಪ್ಪಿ ಅನುಮೋದಿಸಿದೆ. ಈ ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ) 2015 ರನ್ವಯ 18 ವರ್ಷದೊಳಗಿನ ಎಲ್ಲರೂ ಮಕ್ಕಳು ಎಂದು ಪರಿಗಣಿತವಾಗಿದೆ.
ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕಲಂ 32 ಮತ್ತು 36 ರಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಮಕ್ಕಳು ಕಾರ್ಯ ನಿರ್ವಹಿಸದಂತೆ ಹಾಗೂ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದೆ.


ರಾಜಕೀಯ ಪಕ್ಷದ ಅಭ್ಯರ್ಥಿಗಳು/ಸ್ವತಂತ್ರ ಅಭ್ಯರ್ಥಿಗಳು/ಪಕ್ಷದ ಕಾರ್ಯಕರ್ತರುಗಳು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಾಗೂ ರಾಜಕೀಯ ಪಕ್ಷದ ಕುರಿತು ಮತ ನೀಡುವಂತೆ ಕೋರುವುದನ್ನು, ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳದಂತೆ ನಿಷೇಧಿಸಿದೆ. ಒಂದು ವೇಳೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿರುವುದು ಕಂಡು ಬಂದಿದ್ದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಕೂಡ ಚುನಾವಣಾ ಕಾರ್ಯಗಳಲ್ಲಿ ಯಾವುದೇ ಪಕ್ಷಗಳು 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೋರಲಾಗಿದೆ. ಮಕ್ಕಳನ್ನು ಚುನಾವಣಾ ಕಾರ್ಯಗಳಲ್ಲಿ ಬಳಸಿಕೊಂಡಲ್ಲಿ ಕಾಯ್ದೆಯನ್ವಯ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವರದಿ ಪ್ರಜಾ ಶಕ್ತಿ