ಒಗ್ಗಟ್ಟಿನ ಬಲ ಪ್ರದರ್ಶಿಸಿ: ಗೀತಾ ಶಿವರಾಜಕುಮಾರ್

ರಿಪ್ಪನಪೇಟೆ: ಒಗ್ಗಟ್ಟಿನಿಂದ ಎಲ್ಲರೂ ಕೂಡಿ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರಿಪ್ಪನ ಪೇಟೆ ವೃತ್ತದಲ್ಲಿ ಗುರುವಾರ ಹೊಸನಗರ- ರಿಪ್ಪನಪೇಟೆ ಬ್ಲಾಕ್ ಕಾಂಗ್ರೆಸ್ ಘಟಕ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗೆ ಬಂದ ಅಶಕ್ತರು, ಶೋಷಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲಿ ಪಕ್ಷ ಚಟುವಟಿಕೆಗಳಿಗೆ ಮಾತ್ರ ಹೆಚ್ಚು ಒತ್ತು ನೀಡದೆ, ಸಾರ್ವಜನಿಕ ಸಮಸ್ಯೆಗಳ ಪರಿಹರಿಸುವ ಬಗ್ಗೆಯೂ ಆಸಕ್ತಿ ತೋರಬೇಕು ಎಂದರು.

ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಅರಣ್ಯ ಮತ್ತು ಕೈಗಾರಿಕಾ ನಿಗಮ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಗೆಲುವಿಗೆ ಎಲ್ಲರೂ ಕೂಡಿ ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಿದೆ ಎಂದರು.

ರಾಜಕೀಯದಲ್ಲಿ ದ್ವೇಷ- ಅಸೂಯೆ, ಮನಸ್ಥಾಪಗಳು ಸಹಜ. ಆದರೆ, ಇದನ್ನು ಬದಿಗೆ ಸರಿಸಿ, ಗೀತಾ ಅವರ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ್, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಆಯನೂರು ಮಂಜುನಾಥ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶ್ವೇತ ಬಂಡಿ, ಅನಿತಾ ಕುಮಾರಿ, ಬಂಡಿ ರಾಮಚಂದ್ರಪ್ಪ, ಬಿ.ಪಿ.ರಾಮಚಂದ್ರಪ್ಪ, ಸಾಕಮ್ಮ, ಧನಲಕ್ಷ್ಮೀ, ಸುಮ ಸುಬ್ರಹ್ಮಣ್ಯ, ವೈ.ಚ್.ನಾಗರಾಜ ಇದ್ದರು.

ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ

ಬಂಗಾರಪ್ಪ ಸೋಲಿಗೆ ನ್ಯಾಯ ಕಂಡುಕೊಳ್ಳಬೇಕಿದೆ

ಶಿವಮೊಗ್ಗ: ‘ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸೋಲಿಗೆ ನ್ಯಾಯ ಕಂಡುಕೊಳ್ಳಬೇಕಿದೆ. ಅದೇ, ಕಾರಣಕ್ಕೆ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು’ ಎಂದು ಅರಣ್ಯ ಮತ್ತು ಕೈಗಾರಿಕಾ ನಿಗಮ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹೊಸನಗರ ತಾಲ್ಲೂಕು ಬೆಳ್ಳೂರು ಗ್ರಾಮದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಇಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಶಾಸಕ ಹಾಲಪ್ಪ ಅವರು ಮುಳುಗಡೆ ರೈತರ ಕತ್ತು ಹಿಸುಕುತ್ತಿದ್ದಾರೆ. ಜಿಲ್ಲೆಯಲ್ಲಿ ೧೫ ವರ್ಷ ಆಡಳಿತ ನಡೆಸಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಂತದಲ್ಲಿ ನೊಂದ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದರು.

ಹಿಂದೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ರೈತರಿಗೆ ಹಕ್ಕು ಪತ್ರ ನೀಡಿದ್ದರು. ಆದರೆ, ಪ್ರಸ್ತುತ ಸಂಸದ ರಾಘವೇಂದ್ರ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು, ತಮ್ಮ ಆಸ್ತಿ ಇರುವ ಕಡೆ ಮಾತ್ರ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ನೆಟ್ವರ್ಕ್ ಹುಡುಕಬೇಕು ಎಂದರೆ, ಬೆಟ್ಟ- ಗುಡ್ಡ ಏರಬೇಕು. ಇದು ಬಿಜೆಪಿಯ ಸಾಧನೆ ಎಂದರು.

ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ಸ್ವಯಂ ಉದ್ಯೋಗ ಸೃಷ್ಟಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿ ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ. ಅದೇ ರೀತಿ, ನಾನೂ ಕೂಡ ಜಿಲ್ಲೆಯ ಎಲ್ಲಾ ವರ್ಗದವರ ಪರವಾಗಿ ಧ್ವನಿಯಾಗಿ ನಿಲ್ಲುತ್ತೇನೆ. ಆದ್ದರಿಂದ ಚುನಾವಣೆಯಲ್ಲಿ ಮತ ನೀಡಿ ಹರಸಿ ಎಂದು ಕೋರಿದರು.

ನಟ ಶಿವಕುಮಾರ್ ಮಾತನಾಡಿ, ಹಳ್ಳಿಗಳಲ್ಲಿ ಬಾಂಧವ್ಯ ಹೆಚ್ಚು. ಗೀತಾ ಅವರು ಶಿವಮೊಗ್ಗದ ಮಗಳು. ಆದ್ದರಿಂದ ಜಿಲ್ಲೆಯ ಋಣ ತೀರಿಸಲು ಒಂದು ಅವಕಾಶ ಮಾಡಿಕೊಡಿ, ಗೀತಾ ಅವರಿಂದ ಕೆಲಸ ಮಾಡಿಸುವುದು ನನ್ನ ಜವಬ್ದಾರಿ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಬಡತನ ಮತ್ತು ಭಾವನೆಗಳ ಮಧ್ಯ ನಡೆಯುತ್ತಿರುವ ಚುನಾವಣೆ ಇದು. ಬಿಜೆಪಿ ಬಡವರ ಬದುಕಿನ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ರಾಮ ಮಂದಿರ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆ ಉಚಿತವಾಗಿ ನೀಡಿದರೆ, ಸರ್ಕಾರದ ಖಜಾನೆ ಖಾಲಿ ಆಗಲಿದೆ ಎಂದು ಬಿಜೆಪಿಗರು ಟೀಕಿಸುತ್ತಿದ್ದಾರೆ. ಆದರೆ, ಬಿಜೆಪಿ ಆಡಲಿತದಲ್ಲಿ ಶೇ೪೦ ಕಮಿಷನ್ ಲೂಟಿ ಹೊಡೆದಾಗ ಸರ್ಕಾರದ ಖಜಾನೆ ಕಾಲಿ ಆಗಿಲ್ಲವ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ನೂರಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ, ಎಲ್ಲಿಯೂ ಪ್ರಚಾರ ಪಡೆಯಲಿಲ್ಲ. ಬಿಜೆಪಿಯವರು ಪ್ರಚಾರಕ್ಕಾಗಿಯೇ, ದೇವರ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಆದ್ದರಿಂದ, ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಅವರಿಗೆ ಬೆಂಬಲಿಸಬೇಕು ಎಂದರು.

ತಾಲ್ಲೂಕಿನ ಹಾರೋಹಿತ್ಲು, ಕೆಂಚನಾಳ, ಅರಸಾಳು, ಕೋಡೂರು, ಮಾರುತಿಪುರ, ಬಾಳೂರು, ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ಆಯೋಜಿಸಲಾಗಿತ್ತು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶ್ವೇತ ಬಂಡಿ, ಅನಿತಾ ಕುಮಾರಿ, ಬಂಡಿ ರಾಮಚಂದ್ರಪ್ಪ, ಬಿ.ಪಿ.ರಾಮಚಂದ್ರಪ್ಪ, ಸಾಕಮ್ಮ, ಧನಲಕ್ಷ್ಮೀ, ವೈ.ಚ್.ನಾಗರಾಜ, ಸುಮಾ ಸುಬ್ರಹ್ಮಣ್ಯ, ಪ್ರವೀಣ್ ಲಕ್ಷ್ಮೀಕಾಂತ್, ಮಹೇಂದ್ರ ಬುಕ್ಕೆಹೊರೆ, ಸೂಡೂರು ಶಿವಣ್ಣ, ಇದ್ದರು‌.

ಮೂಲೆಗದ್ದೆ ಮಠಕ್ಕೆ ಗೀತಾ ಶಿವರಾಜಕುಮಾರ್ ಭೇಟಿ

ಶಿವಮೊಗ್ಗ: ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಗುರುವಾರ ಹೊಸನಗರ ತಾಲ್ಲೂಕಿನ ಮೂಲೆಗದ್ದೆ ಮಠಕ್ಕೆ ಭೇಟಿ ನೀಡಿ, ಶ್ರೀಗಳಾದ ಶ್ರೀ ಅಭಿನವ ಚೆನ್ನಬಸವ ಮಹಾಸ್ವಾಮಿ ಅವರ ಆಶೀರ್ವಾದ ಪಡೆದರು.

ಅರಣ್ಯ ಮತ್ತು ಕೈಗಾರಿಕಾ ನಿಗಮ ಅಧ್ಯಕ್ಷ ಶ್ರೀ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ಶ್ರೀ ಅನಿಲ್ ಕುಮಾರ್ ತಡಕಲ್, ಖ್ಯಾತ ಚಲನಚಿತ್ರ ನಟ ಶ್ರೀ ಶಿವರಾಜ ಕುಮಾರ್, ಶಾಸಕ ಮಿತ್ರರಾದ ಶ್ರೀ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಆಯನೂರು ಮಂಜುನಾಥ, ಕಾಂಗ್ರೆಸ್ ಜಿಲ್ಲಾ ಘಟಕ ಮಹಿಳಾ ಅಧ್ಯಕ್ಷೆ ಶ್ರೀಮತಿ ಅನಿತಾ ಕುಮಾರಿ,ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ ಇದ್ದರು.

ದಲಿತ ಮುಖಂಡರ ಮನೆಗೆ ಗೀತಾ ಶಿವರಾಜಕುಮಾರ್ ಭೇಟಿ

ಶಿವಮೊಗ್ಗ: ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಗುರುವಾರ ದಲಿತ ಮುಖಂಡರ ಮನೆಗೆ ಭೇಟಿ ನೀಡಿದರು.

ಹೊಸನಗರ ತಾಲ್ಲೂಕು ಹರತಾಳು- ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಗೇರಿ ಮಂಡ್ರಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಇದೇ ವೇಳೆ, ಗೀತಾ ಶಿವರಾಜಕುಮಾರ್ ಅವರು ಸ್ಥಳೀಯ ದಲಿತ ಮುಖಂಡರ ಮನೆಗೆ ಭೇಟಿ ಸತ್ಕಾರ ಸ್ವೀಕರಿಸಿದರು.