ವಕೀಲರ ಸ್ಪಂದನೆಯಿಂದ ನನ್ನ ಗೆಲುವಿನ ವಿಶ್ವಾಸ ಇನ್ನೂ ಹೆಚ್ಚಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ನಗರದ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರ ಮತಯಾಚನೆ ಮಾಡಿ, ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದ ವಿಚಾರಗಳು ಬಂದಾಗ ವಕೀಲರು ತಮ್ಮದೇ ಆದ ರೀತಿಯಲ್ಲಿ ಶಕ್ತಿ ಮೀರಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಇಂದು ವಕೀಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅನೇಕ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಅದೆಲ್ಲವನ್ನು ಉತ್ತಮ ರೀತಿಯಲ್ಲಿ ಪರಿಗಣಿಸಲಾಗುವುದು. ಶಿವಮೊಗ್ಗ ನಗರವನ್ನು ಮಾದರಿ ನಗರವನ್ನಾಗಿಸಲು ಹಾಗೂ ಉತ್ತಮ ನ್ಯಾಯಾಲಯ ಕ್ಯಾಂಪಸ್ನ್ನು ನಿರ್ಮಿಸುವ ಬಗ್ಗೆಯೂ ಸಹ ವಕೀಲರಿಂದ ಸೂಚನೆ ಬಂದಿದೆ ಎಂದ ಅವರು, ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರುಗಳಿಗಾಗಿ ನಿರ್ಮಾಣ ಮಾಡಿದಂತಹ ೬೦ ವಸತಿ ಗೃಹಗಳನ್ನು ನ್ಯಾಯಾಧೀಶರ ಕೊರಿಕೆಯ ಮೇರೆಗೆ ನ್ಯಾಯಾಂಗ ಇಲಾಖೆಗೆ ಯಥಾವತ್ತಾಗಿ ಬಿಟ್ಟುಕೊಟ್ಟ ಘಟನೆಯನ್ನು ಸಂಸದರು ಈ ಸಂದರ್ಭದಲ್ಲಿ ಸ್ಮರಿಸಿದರು.
ಮೊದಲ ಹಂತದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ ಇದಕ್ಕೆ ಬಿಸಿಲಿನ ತಾಪಮಾನವೂ ಕಾರಣವಾಗಿರಬಹುದು. ಪ್ರಧಾನಿ ನರೇಂದ್ರ ಮೋದಿಯವರು ವಾರದಲ್ಲಿ ೭ ದಿನವೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಪುಣ್ಯಾತ್ಮನ ಕಾರ್ಯವೈಖರಿಗಾಗಿ ಮತದಾರರು ತಮ್ಮ ಒಂದು ಮತವನ್ನು ನೀಡುವ ಮೂಲಕ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಸಪ್ಪ ಗೌಡ ಸೇರಿದಂತೆ ಅನೇಕ ವಕೀಲರುಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.