ಭದ್ರಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸಂಜೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು, ಸಹಸ್ರಾರು ಕಾರ್ಯಕರ್ತರೊಂದಿಗೆ ರೋಡ್ ಷೊ ನಡೆಸಿದರು.
ರೋಡ್ ಷೊನಲ್ಲಿ ಕಾರ್ಯಕರ್ತರು ‘ಗೀತಕ್ಕ’ ಅವರನ್ನು ಬೆಂಬಲಿಸಿ ಎಂದು ಘೋಷಣೆ ಕೂಗುವ ಮೂಲಕ ಮತ ಪ್ರಚಾರ ನಡೆಸಿದರು.
ರೋಡ್ ಷೊ ಸಂಜೆ 6 ಕ್ಕೆ ತಾಲ್ಲೂಕಿನ ಬೊಮ್ಮನಕಟ್ಟೆಯಿಂದ ಪ್ರಾರಂಭವಾಯಿತು. ರೋಡ್ ಷೊ ಮೂಲಕ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಸಾಗುತ್ತಿದ್ದಾಗ ಮಹಿಳೆಯರು ಆರತಿ ಬೆಳಗುವುದು ಹಾಗೂ ಕಾರ್ಯಕರ್ತರು ಹೂವಿನ ಹಾರ ಹಾಕುವ ಮೂಲಕ ಶುಭ ಕೋರಿದರು.
ರೋಡ್ ಷೋ ಪೇಪರ್ ಟೌನ್- ಚೌಡಮ್ಮನ ದೇವಸ್ಥಾನ, ಕೂಲಿ ಬ್ಲಾಕ್ ಸೆಡ್, ಮೇಲೂರ್ ಸೆಡ್, ಉಜ್ಜಯಿನಿಪುರ,ಸುರ್ಗಿತೋಪು, ಆಂಜನೇಯ ಅಗ್ರಹಾರ, ಜಿಂಕ್ ಲೈನ್ ಮುಖಾಂತರ ತೆರೆದ ವಾಹನದಲ್ಲಿ ಮತಯಾಚನೆ ಕಾರ್ಯ ನಡೆಯಿತು.
ಅತ್ಯುತ್ಸಾಹದಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ, ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ಗೀತಾ ಶಿವರಾಜಕುಮಾರ ಅವರ ಉತ್ಸಾಹ ಇಮ್ಮಡಿಗೊಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ, ಏನು ಬೇಕಾದರು ಸಾಧಿಸಬಹುದು. ಇಲ್ಲಿನ ವಿಐಎಸ್ ಎಲ್ ಕಾರ್ಖಾನೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಗಾಢವಾಗಿ ಬೇರೂರಿ ನಿಂತಿವೆ. ಈ ಎಲ್ಲಾ ಸಮಸ್ಯೆಗಳಿಗೆ ಕೇಂದ್ರದ ಹಂತದಲ್ಲಿ ಪರಿಹಾರ ಒದಗಿಸಲು ಮತ ನೀಡಿ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.
ಶಾಸಕ ಬಿ.ಕೆ.ಸಂಗಮೇಶ್ ಮಾತನಾಡಿ, ಜಿಲ್ಲೆಯ ಸರ್ವೋತೋಮುಖ ಏಳಿಗೆಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಎಂದು ಕೋರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬಲ್ಕೀಸ್ ಭಾನು ಮಾತನಾಡಿ, ಇಲ್ಲಿನ ಸ್ಥಳೀಯ ಸಮಸ್ಯೆಗಳ ಪರಿಹರಿಸಲು ಶಾಸಕ ಸಂಗಮೇಶ್ ಅವರ ಕೈ ಬಲಪಡಿಸಿ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ, ಮುಖಂಡರಾದ ಬಿ.ಕೆ.ಮೋಹನ್, ಗಣೇಶ್, ಭದ್ರಾವತಿ ಕಾಂಗ್ರೆಸ್ ಸಂಯೋಜಕ ಬಿಆರ್ ಪಿ ರಮೇಶ್ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.