ಬೈಂದೂರು:’ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಕ್ಕ ಗೆದ್ದರೆ ಸಂವಿಧಾನ, ನಾರಾಯಣ ಗುರುಗಳ ವಿಚಾರಧಾರೆ, ಚಿಂತನೆಗಳು ಗೆದ್ದಂತೆ’ ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿಂತಕರೂ ಆದ ನಿಖೇತ್ ರಾಜ್ ಮೌರ್ಯ ಹೇಳಿದರು.
ತಾಲ್ಲೂಕಿನ ಕಿರಿಮಂಜೇಶ್ವರದಲ್ಲಿ ಮಂಗಳವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ ಪರ ಸಾತಯಾಚನೆ ಸಭೆ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಲ್ಲಿ ಬಸವಣ್ಣ ಹಾಗೂ ಕುವೆಂಪುರವರ ತತ್ವ ಸಿದ್ಧಾಂತಗಳನ್ನು ಜಾಗೃತಗೊಳಿಸಬೇಕಿದೆ. ಅದ್ದರಿಂದ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಶಿಕಾರಿಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಗಾರರು ಇದ್ದಾರೆ. ಆದರೆ, ಈ ರೈತರಿಗೆ ನ್ಯಾಯ ಒದಗಿಸಿಕೊಡಲು ಬಿಜೆಪಿ ಸರ್ಕಾರದಿಂದ ಆಗಿಲ್ಲ. ಇಲ್ಲಿ, ವಿದೇಶದಿಂದ ಅಡಿಕೆ ಆಮದಿಗೆ ಬಿಜೆಪಿ ಮುಂದಾಗಿದೆ. ಬೂತಾನ್ ಅಡಿಕೆಗೆ ಮಣೆ ಹಾಕಲಾಗಿದೆ. ಇದರಿಂದ, ರೈತರ ಅಡಿಕೆ ತೋಟಗಳು ಅವನತಿಯ ಹಂತ ತಲುಪಲಿವೆ ಎಂದರು.
ದೇಶದಲ್ಲಿ ಬಿಜೆಪಿ 400 ಸ್ಥಾನ ಪಡೆದರೆ, ಸಂವಿಧಾನ ತಿದ್ದುಪಡಿ ಮಾಡುವುದಾಗಿ ಹೇಳುತ್ತಿದ್ದಾರೆ. ನೆನಪಿರಲಿ, ಇದೇ ಸಂವಿಧಾನದಿಂದ ಬಡವರ ಮಕ್ಕಳು, ಕೂಲಿಕಾರ್ಮಿಕರ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಅವಕಾಶ ಕಲ್ಪಿಸಿರುವುದು. ಆದರೆ, ಬಿಜೆಪಿಯವರು ಇಂತಹ ಸಂವಿಧಾನವನ್ನು ಅಳಿಸಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಕೂಡದು ಎಂದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರ ಅಳಲು ಆಲಿಸಲು ಸರ್ಕಾರದ ವ್ಯವಸ್ಥೆ ಇರುವುದು. ಆದರೆ, ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದ ಜಾತಿ- ಧರ್ಮಗಳ ನಡುವೆ ಬಿರುಕು ಮೂಡಿಸುತ್ತಿದೆ. ಸಮುದಾಯಗಳ ನಡುವೆ ಭೇದ- ಬಾವ ಮೂಡಿಸಿ, ಮಾನವ ಹಕ್ಕಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದರು.
ಕೆಳಗೆ ಬಿದ್ದವರನ್ನು ಕೈ ಹಿಡಿದು ಮೇಲೆತ್ತುವ ಕಾರ್ಯ ಆಗಬೇಕು. ಇದು ನಿಜವಾದ ಭಾರತದ ಕಲ್ಪನೆ. ಆದರೆ, ಪ್ರಸ್ತುತ ಬಿಜೆಪಿ ಆಡಳಿತದಿಂದ ಕೆಳಗೆ ಬಿದ್ದವರು ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯವರ ಎಂದು ನೋಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಲ್ಲದು ಎಂದರು.
ಮತದಾನದ ದಿನ ನೆನಪಾಗಬೇಕಿರುವುದು ದೇಶದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಸೇರಿದಂತೆ ಮೂಲ ಸೌಕರ್ಯಗಳನ್ನು ಬಿಜೆಪಿ ಆಡಳಿತದಲ್ಲಿ ಕಲ್ಪಿಸದೇ ಇರುವುದು. ಪ್ರಸ್ತುತ ಬಡವರು ಮನೆ ಕಟ್ಟಲು ಬಳಸುವ ಇಟ್ಟಿಗೆ, ಸಿಮೆಂಟ್ ಖರೀದಿಸಲು ಕೂಡ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿಗೆ ಬಿಜೆಪಿ ಅಡಳಿತ ದೇಶವನ್ನು ತಂದಿಟ್ಟಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೀನು ತಿನ್ನುವ ನಾಯಕರಿಗೆ ಮತ ನೀಡಬೇಡಿ ಎಂದು ಹೇಳಿಕೆ ನೀಡಿದ್ದಾರೆ. ಇದು ಮೀನುಗಾರಿಕೆಯನ್ನೇ ನಂಬಿಕೊಂಡ ಕುಟುಂಬಗಳಿಗೆ ಮಾಡುತ್ತಿರುವ ಅಪಮಾನ. ಇಲ್ಲಿ ಮೀನುಗಾರರ ಅಸ್ತಿತ್ವ ರೂಪಿಸಬೇಕಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು. ಗೀತಕ್ಕಗೆ ಮತ ನೀಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಹೆಣ್ಣುಮಕ್ಕಳಿಗೆ ಸಮಾನತೆ ದೊರಕಿಸಿಕೊಡಲು ಸಾಧ್ಯ. ಬೆಲೆ ಏರಿಕೆಯ ಪರಿಸ್ಥಿತಿ ನಿಭಾಯಿಸಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರವನ್ನು ಜನ ಸಾಮಾನ್ಯರು ನಂಬಕೂಡದು. ಕ್ಷೇತ್ರದ ರಕ್ಷಣೆಗೆ ನನಗೆ ಮತ ನೀಡಿ ಎಂದು ಕೋರಿದರು.
ನಟ ದುನಿಯಾ ವಿಜಯ್ ಮಾತನಾಡಿ, ಹೆಣ್ಣು ಎಂದರೆ ಶಕ್ತಿದೇವತೆ. ದೇಶದಲ್ಲಿ ಹಿಂದೂ- ಮುಸ್ಲಿಂ ಸಮುದಾಯದವರು ಹೋಡೆದಾಡಬೇಕು. ಆ ಪರಿಸ್ಥಿತಿಯನ್ನು ಬಿಜೆಪಿಯವರು ನಿರ್ಮಾಣ ಹಾಡುತ್ತಿದ್ದಾರೆ. ಅದಕ್ಕೆ ಆಸ್ಪದ ಕೊಡಕೂಡದು ಎಂದರು.
ನಟ ಶಿವರಾಜಕುಮಾರ ಮಾತನಾಡಿ, ಮಾನವೀಯತೆಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಬಡವರ ಸಮಸ್ಯೆಗಳಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರವನ್ನು ಆಯ್ಕೆ ಮಾಡುವುದು. ಇಲ್ಲಿ ಕೇವಲ ಭರವಸೆಗಳಿಗೆ ಮರಳಾಗಕೂಡದು. ಇಲ್ಲಿ ಸೇವೆ ಸಲ್ಲಿಸಲು ಗೀತಾಗೆ ಅವಕಾಶ ಕಲ್ಪಿಸಿಕೊಡಿ ಎಂದರು.
ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ್ ಶೆಟ್ಟಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಆರ್.ರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜು ಪೂಜಾರಿ, ಬೈಂದೂರು ಚುನಾವಣೆ ಉಸ್ತುವಾರಿ ಜಿ.ಎ.ಭಾವ, ಪ್ರಮುಖರಾದ ಮಹಿಳಾ ಅಧ್ಯಕ್ಷ ಗೌರಿ ದೇವಾಡಿಗ, ಇಂದಿರಾ, ಅರವಿಂದ ಪೂಜಾರಿ,ಮದನ್ ಕುಮಾರ್, ಚಂದ್ರ ಪೂಜಾರಿ, ಶಂಕರ್ ಪೂಜಾರಿ, ಉದಯ ಕುಮಾರ್ ಶೆಟ್ಟಿ ಸೇರಿ ಕಾರ್ಯಕರ್ತರು ಇದ್ದರು. ಹೂ
ಬಿಜೆಪಿಯವರು ಹಿಂದೂ- ಮುಸ್ಲಿಂರ ನಡುವೆ ವಿಷ ಬೀಜ ಬಿತ್ತಿ ಸಮಾಜದಲ್ಲಿ ಬಿರುಕು ಮೂಡಿಸಲಾಗುತ್ತಿದೆ. ಆದ್ದರಿಂದ, ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅದಕ್ಕೆ ಅವಕಾಶ ಕಲ್ಪಿಸಿಕೊಡಬೇಡಿ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ನಟ ದುನಿಯಾ ವಿಜಯ್ ಹೇಳಿದರು.