ಸೊರಬ : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಸೊರಬ ತಾಲ್ಲೂಕಿನ ಆನವಟ್ಟಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ದಿ ಕಾರ್ಯಗಳು ನಡೆದಿವೆ. ಸಂಸದ ಬಿ.ವೈ.ರಾಘವೇಂದ್ರ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಇವರನ್ನು ನಾಲ್ಕನೇ ಬಾರಿಗೆ ಅತಿ ಹೆಚ್ಚಿನ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಡಬೇಕೆಂದರು.


ಮೇ.೭ರಂದು ಬೆಳಗ್ಗೆ ೧೦.೩೦ರೊಳಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದ ಅವರು, ದೇಶದ ಅಭ್ಯುದಯಕ್ಕಾಗಿ ಹಾಗೂ ರಾಷ್ಟ್ರದ ರಕ್ಷಣೆಗಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ದೇಶದ ಜನತೆಯ ನಿರೀಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಸಂಖ್ಯೆ ೨ರ ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ಅಭೂತಪೂರ್ವ ಗೆಲುವಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
‘ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವವರು ಭಯ ಪಡಬೇಕು. ಆ ರೀತಿಯ ಬಹುಮತಗಳೊಂದಿಗೆ ಬಿ.ವೈ. ರಾಘವೇಂದ್ರ ಗೆದ್ದು ಬರಲಿದ್ದಾರೆ.

ರಾಜ್ಯ ಸರ್ಕಾರ ಸ್ಥಗಿತವಾಗಿದ್ದು ಸಂಪೂರ್ಣ ದಿವಾಳಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಯಾವೊಬ್ಬ ಮತದಾರರನೂ ಒಲವು ತೋರುತ್ತಿಲ್ಲ. ಕಾಂಗ್ರೆಸ್‌ಗೆ ದಿಕ್ಕು ದಿಸೆ ಇಲ್ಲ’ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಸೊರಬ ಬಿಜೆಪಿ ಅಧ್ಯಕ್ಷ ಪ್ರಕಾಶ್, ಸೊರಬ ಕ್ಷೇತ್ರದ ಮಾಜಿ ಶಾಸಕ ಕುಮಾರಬಂಗಾರಪ್ಪ, ಶಾಸಕರಾದ ಡಿ.ಎಸ್,ಅರುಣ್, ಭಾರತಿ ಶೆಟ್ಟಿ, ಹರತಾಳು ಹಾಲಪ್ಪ ಸೇರಿದಂತೆ ಜೆಡಿಎಸ್‌ನ ಮುಖಂಡರು ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ