ಬೈಂದೂರು : ದೇಶಾದ್ಯಂತ ಮೋದಿ ಪರವಾದ ಅಲೆ ವ್ಯಾಪಕವಾಗಿದ್ದು, ಇದರ ಪರಿಣಾಮವಾಗಿ ಎನ್‌ಡಿಎ ಮೈತ್ರಿಕೂಟ ೪೦೦ ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಸಂಸದೀಯ ಮಂಡಳೀಯ ಸದಸ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೂ ಕೂಡ ೨೮ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ದೇವದುರ್ಲಭ ಕಾರ್ಯಕರ್ತರು ಹಗಲಿರುಳೆನ್ನದೇ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಂಸದ ಬಿ.ವೈ.ರಾಘವೇಂದ್ರ ೧೦ ವರ್ಷಗಳ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಜನತೆ ಎಲ್ಲವನ್ನೂ ವೀಕ್ಷಿಸುತ್ತಿದೆ. ಕ್ರಿಯಾಶೀಲ ಸಂಸದರನ್ನು ಭಾರೀ ಮತಗಳ ಅಂತರದಿಂದ ಸಂಸತ್ತಿಗೆ ಕಳುಹಿಸಿಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಎಲ್ಲದಕ್ಕೂ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸುತ್ತಿದೆ. ರಾಜ್ಯದಲ್ಲಿ ಹಿಂದೆಂದೂ ಕಂಡಿರಯದ ಬರಗಾಲದಿಂದಾಗಿ ರೈತರು ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರ ಬಗ್ಗೆ ಗಮನ ಕೊಡುತ್ತಿಲ್ಲ. ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯ ಸರ್ಕಾರದ ವಿರುದ್ದ ಜನತೆ ಬೇಸತ್ತಿದ್ದಾರೆ. ಇದರ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಬೀರಲಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶಾಸಕರ ಗುರುರಾಜ್ ಗಂಟಿಹೊಳಿ, ಸಂಸದ ಬಿ.ವೈ.ರಾಘವೇಂದ್ರ, ಹಾಗೂ ಇತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯವನ್ನು ಬರದಿಂದ ಮುಕ್ತ ಮಾಡುವಂತೆ ಜನ ಸಾಮಾನ್ಯರನ್ನು ರೈತರನ್ನು ರಕ್ಷಿಸುವಂತೆ ಹಾಗೂ ನರೇಂದ್ರ ಮೋದಿಯವರಿಗೆ ದೇಶ ಮುನ್ನಡೆಸಲು ಮತ್ತಷ್ಟು ಶಕ್ತಿಕೊಡುವಂತೆ ಯಡಿಯೂರಪ್ಪ ಮತ್ತು ಇತರರು ಪ್ರಾರ್ಥಿಸಿದರು.


ವಿರೋಧ ಪಕ್ಷಗಳಿಗೆ ನಾಯಕತ್ವದ ಕೊರತೆ ಇದೆ. ಅವರಲ್ಲಿ ಯಾರು ಪ್ರಧಾನಿ ಎಂಬುದೇ ಸ್ಪಷ್ಟವಾಗಿಲ್ಲ. ಇದರಿಂದಾಗಿ ಆ ಪಕ್ಷಗಳಲ್ಲಿ ಒಮ್ಮತ ಮೂಡಲು ಸಾಧ್ಯವಿಲ್ಲ, ಬಿಜೆಪಿಯಲ್ಲಿ ದೃಢ ನಾಯಕತ್ವವಿದೆ. ಕಳೆದ ಹತ್ತು ವರ್ಷಗಳಿಂದ ಮೋದಿಯವರು ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಈ ಬಾರಿಯೂ ಸಹ ಸಂಸದ ಬಿ.ವೈ.ರಾಘವೇಂದ್ರ ಅವರು ಬಾರೀ ಮತಗಳ ಅಂತರದಿಂದ ಆಯ್ಕೆ ಯಾಗಲಿದ್ದಾರೆ.
-ಅಣ್ಣಾಮಲೈ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ

ವರದಿ ಪ್ರಜಾ ಶಕ್ತಿ