ಹೈನು ರಾಸುಗಳ ಆರೋಗ್ಯ ಸುಧಾರಣೆ, ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಹಾಲು ಉತ್ಪಾದಕರು ಹಸಿರು ಮೇವನ್ನು ಬೆಳೆಸಿ ಬಳಸಸಲು ಹೈನು ಉತ್ಪಾದಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಎನ್.ಎಲ್.ಎಂ (National Livestock Mission)ಯೋಜನೆಯ ಅನುದಾನದಡಿ ಎನ್.ಡಿ.ಡಿ.ಬಿ ಹಾಗೂ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ವತಿಯಿಂದ ಶಿಮುಲ್‍ಗೆ ರೂ. 1.20 ಕೋಟಿ ಮೊತ್ತದ ಹಸಿರು ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್‍ಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ ಎಂದು ಶಿಮುಲ್
ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ತಿಳಿಸಿರುತ್ತಾರೆ.


ಕಳೆದ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದ ಹಿನ್ನೆಲೆ ಮೇವಿನ ಲಭ್ಯತೆ ಕಡಿಮೆಯಾದ್ದರಿಂದ ದುಬಾರಿ ಬೆಲೆ ತೆತ್ತು ಮೇವನ್ನು ಖರೀದಿಸಿ ನಷ್ಟ ಅನುಭವಿಸಿದ ರೈತರಿಗೆ ನೆರವಾಗುವ ಉದ್ದೇಶದಿಂದ ಮುಂಗಾರು ಹಂಗಾಮು ಪ್ರಾರಂಭವಾಗುವ ಮುನ್ನ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ವಿವಿಧ ಮೇವಿನ ತಳಿಗಳ 3/5 ಕೆ.ಜಿ ಕಿರು ಪೊಟ್ಟಣಗಳನ್ನು (ಮಿನಿ ಕಿಟ್) ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಿದೆ.
ಪ್ರತಿಯೊಬ್ಬ ಹಾಲು ಉತ್ಪಾದಕರಿಗೂ ಮೇವಿನ ಬೀಜದ ಕಿರು ಪೆÇಟ್ಟಣಗಳನ್ನು ವಿತರಿಸಿ ಹೆಚ್ಚು ಹಸಿರು ಮೇವು ಉತ್ಪಾದಿಸುವ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವಾಗಿ ಮಾರ್ಪಡಿಸಲು ಯೋಜಿಸಲಾಗಿದೆ.

ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಶೇಖರಣೆ ಆಧಾರದ ಮೇಲೆ ಮಳೆ ಆಶ್ರಿತ ರೈತರು, ನೀರಾವರಿ ಹೊಂದಿರುವ ರೈತರನ್ನು ಗುರುತಿಸಿ ಯೋಜನೆಯ ನಿಯಮದಂತೆ ಮೇವಿನ ಬೀಜದ ಮಿನಿ ಕಿಟ್‍ಗಳನ್ನು ಹಂಚಿಕೆ ಮಾಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ.
ಪ್ರಸ್ತುತ 2024-25 ನೇ ಸಾಲಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 120 ಮೆಟ್ರಿಕ್ ಟನ್ ಬಹು ಕಟಾವು ಜೋಳ CSH-24MF=20MT, CSH-43MF=90MT, ಮೆಕ್ಕೆಜೋಳ J177-10MT ಮೇವಿನ ಬಿತ್ತನೆ ಬೀಜ ಹಂಚಿಕೆಯಾಗಿರುತ್ತದೆ.


ಕೇಂದ್ರ ಸರ್ಕಾರದ ಎನ್.ಎಲ್.ಎಂ ಯೋಜನೆಯಡಿ ಒಕ್ಕೂಟಕ್ಕೆ ಹಂಚಿಕೆ ಮಾಡಲಾಗಿರುವ ಹಸಿರು ಮೇವಿನ ಬಿತ್ತನೆ ಬೀಜದ ಮಿನಿಕಿಟ್‍ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಯೋಜನೆಯ ನಿಬಂಧನೆ ಅನುಸಾರ (ಸಾಮಾನ್ಯ 70%, ಪರಿಶಿಷ್ಟ ಜಾತಿ 20%, ಪರಿಶಿಷ್ಟ ಪಂಗಡ 10%) ಹಾಲು ಶೇಖರಣೆಯ ಆಧಾರದ ಮೇಲೆ ವಿತರಿಸಲು ಯೋಜಿಸಲಾಗಿದೆ.
ಹಾಲು ಉತ್ಪಾದಕರು ಯೋಜನೆಯಡಿ ಲಭ್ಯವಿರುವ ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್‍ಗಳನ್ನು ಉಚಿತವಾಗಿ ಪಡೆದು ಹಸಿರು ಮೇವು ಉತ್ಪಾದನೆ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ಅವರು ತಿಳಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ