ಲಾಕಪ್ ಡೆತ್ ಆರೋಪದ ಹಿನ್ನೆಲೆಯಲ್ಲಿ ಮೃತ ಆರೋಪಿಯ ಕುಟುಂಬಸ್ಥರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ತಾಲೂಕಿನಲ್ಲಿ ನಡೆದಿದೆ.
ಮಟ್ಕಾ ಆಡಿಸುತ್ತಿದ್ದ ಆದಿಲ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಆರೋಪಿಗೆ ಬಿಪಿ ಲೋ ಆದ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಚಿಕಿತ್ಸೆ ಫಲಿಸದೇ ಆರೋಪಿ ಆದಿಲ್ ಮೃತಪಟ್ಟಿದ್ದಾನೆ.ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆದಿಲ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ನಂತರ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕುಟುಂಬಸ್ಥರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಜೀಪನ್ನು ಧ್ವಂಸಗೊಳಿಸಿ, ಪಲ್ಟಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ಪೊಲೀಸರು ಆದಿಲ್ ಎಂಬ ವ್ಯಕ್ತಿಯನ್ನು ಕರೆತಂದಿದ್ದರು. ಬಳಿಕ ಆತ ಕುಸಿದು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಬ್ಬರು ಪೊಲೀಸ್ ಅಧಿಕಾರಿಗಳಾದ ಪ್ರಶಾಂತ್ ಮುನ್ನೋಳಿ ಮತ್ತು ನಿರಂಜನ್ ರವರನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.