ಶಿವಮೊಗ್ಗ ಜಿಲ್ಲೆಯಲ್ಲಿ ವಿಧ್ಯಾರ್ಥಿನಿಯರ ರಕ್ಷಣೆಗಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಮಹಿಳೆ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ಮಾಡುವ, ಅಸಭ್ಯವಾಗಿ ವರ್ತಿಸುವವರ ವಿರುದ್ಧ, ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸಮುದಾಯದತ್ತ ಪೊಲೀಸ್
ನ ಭಾಗವಾಗಿ ಚೆನ್ನಮ್ಮ ಪಡೆಯನ್ನು ರಚಿಸಲಾಗಿರುತ್ತದೆ.ಶ್ರೀ ಮಿಥುನ್ ಕುಮಾರ್ ಜಿ.ಕೆ
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು, ಶಿವಮೊಗ್ಗ ನಗರದ ಕಮಲಾ ನೆಹರು ಸ್ಮಾಕರ, ರಾಷ್ಟ್ರೀಯ ಮಹಿಳಾ ಕಾಲೇಜು, ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆಗೆ ಚಾಲನೆ ನೀಡಿ, ವಿಧ್ಯಾರ್ಥಿಗಳನ್ನು ಉದ್ದೇಶಿಸಿ, ಈ ಕೆಳಕಂಡಂತೆ ಮಾತನಾಡಿದರು.
1) ವಿಧ್ಯಾರ್ಥಿನಿಯರ ಜೀವನವನ್ನು ರೂಪಿಸುವಲ್ಲಿ ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣವೇ ಪ್ರಮುಖ ಸಾಧನವಾಗಿರುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿರುತ್ತದೆ.
2) ವಿಧ್ಯಾರ್ಥಿ ಜೀವನದಲ್ಲಿ ಯಾವುದೋ ಸಣ್ಣ ಪುಟ್ಟ ಸಮಸ್ಯೆ / ಕಿರಿಕಿರಿಗಳಿಂದಾಗಿ ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆಯಾದಾಗ, ಅವರು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದೇ ಅಲ್ಲಿಗೇ ನಿಲ್ಲಿಸುವ ಸಾಧ್ಯತೆ ಇರುತ್ತದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ಮತ್ತು ಅವರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಆಧ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಈಗಾಗಲೇ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು, ಹೆಣ್ಣು ಮಕ್ಕಳ ರಕ್ಷಣೆಯ ನಿಟ್ಟಿನಲ್ಲಿ, ಸಮುದಾಯದತ್ತ ಪೊಲೀಸ್ ನ ಒಂದು ಭಾಗವಾಗಿ ಚೆನ್ನಮ್ಮ ಪಡೆಯನ್ನು ರಚಿಸಲಾಗಿರುತ್ತದೆ.
3) ಚೆನ್ನಮ್ಮ ಪಡೆಯನ್ನು ವಿಧ್ಯಾರ್ಥಿನಿಯರ ಸುರಕ್ಷತೆ ಮತ್ತು ರಕ್ಷಣೆಯ ಉದ್ದೇಶದಿಂದ ರಚಿಸಿದ್ದು, ಚೆನ್ನಮ್ಮ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪ್ರಮುಖವಾಗಿ ಶಾಲಾ ಕಾಲೇಜುಗಳು ಬೆಳಗ್ಗೆ ಆರಂಭವಾಗುವ ಮತ್ತು ಮುಕ್ತಾಯವಾಗುವ ಸಮಯದಲ್ಲಿ ಶಾಲಾ ಕಾಲೇಜುಗಳ ಹತ್ತಿರ, ವಿಧ್ಯಾರ್ಥಿನಿಯರ ಹಾಸ್ಟೆಲ್ ಗಳ ಹತ್ತಿರ, ಪಾರ್ಕ್ ಗಳ ಬಳಿ ಮತ್ತು ಬಸ್ ಸ್ಟಾಂಡ್ ಗಳಲ್ಲಿ ಗಸ್ತು ಮಾಡಲಿದ್ದು, ಈ ವೇಳೆ ಅನಾವಶ್ಯಕವಾಗಿ ಸೇರಿರುವ ಗುಂಪುಗಳು, ಅಸಭ್ಯವಾಗಿ ವರ್ತಿಸುವವರು, ಸಮಾಘಾತುಕ ಚಟುವಟಿಕೆಗಳನ್ನು ಮಾಡುವವರು ಹಾಗೂ ಕೀಟಲೆ ಮಾಡುವವರ ಮೇಲೆ ನಿಗಾವಹಿಸಲಿದ್ದು, ಯಾರಾದರೂ ತೊಂದರೆಯನ್ನು ಕೊಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ಕೂಡಲೇ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಿದ್ದಾರೆ.
4) ಚೆನ್ನಮ್ಮ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಫ್ತಿಯಲ್ಲಿಯೂ ಸಹಾ ಬಸ್ಸ್ಟಾಂಡ್, ಶಾಲಾ ಕಾಲೇಜುಗಳ ಹತ್ತಿರ, ಪಾರ್ಕ್ ಗಳ ಹತ್ತಿರ ಗಸ್ತಿಗೆ ನೇಮಕ ಮಾಡಲಿದ್ದು, ಇವರು ಮಫ್ತಿಯಲ್ಲಿ ಗಸ್ತು ಮಾಡಿ, ಯಾರಾದರೂ ಹೆಣ್ಣು ಮಕ್ಕಳಿಗೆ ತೊಂದರೆಯನ್ನು ಕೊಡುವವರು ಕಂಡುಬಂದಲ್ಲಿ, ಅಂತಹವರ ವಿರುದ್ದ ಕೂಡಲೇ ಕಾನೂನು ರೀತ್ಯ ಕ್ರಮವನ್ನು ಕೈಗೊಳ್ಳಲಿದ್ದಾರೆ.
5) ಚೆನ್ನಮ್ಮ ಪಡೆಯ ಅಧಿಕಾರಿ ಸಿಬ್ಬಂಧಿಗಳು ಕಾಲೇಜುಗಳಿಗೆ ಭೇಟಿ ನೀಡಿ, ವಿಧ್ಯಾರ್ಥಿನಿಯರಿಗೆ ಮಹಿಳಾ ಮತ್ತು ಮಕ್ಕಳ ಕಾನೂನಿನ ಬಗ್ಗೆ ಹಾಗೂ ಕಾನೂನಿನಲ್ಲಿ ಅವರಿಗಿರುವ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಇದರೊಂದಿಗೆ ಯಾವುದೇ ತುರ್ತು ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ, ಕರಾಟೆ/ ಬೇಸಿಕ್ ಸೆಲ್ಫ್ ಡಿಫೆನ್ಸ್ ಟೆಕ್ನಿಕ್ ಗಳ ಬಗ್ಗೆ ತರಬೇತಿಯನ್ನು ಸಹಾ ನೀಡಲಿದ್ದಾರೆ. ಇದರಿಂದಾಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.
6) ಸಮಸ್ಯೆಗಳ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ, ಸಮಸ್ಯೆಯ ಮೂಲದಲ್ಲಿಯೇ ನೀವು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ, ಆ ತೊಂದರೆಯನ್ನು ಬುಡದಿಂದಲೇ ಬಗೆಹರಿಸಲು ಸಾಧ್ಯವಿರುತ್ತದೆ. ಇದರಿಂದ ಮುಂದೆ ಸಮಸ್ಯೆ ದೊಡ್ಡದಾಗದಂತೆ ತಡೆಯಲು ಸಾಧ್ಯವಿರುತ್ತದೆ ಹಾಗೂ ವಿಧ್ಯಾರ್ಥಿನಿಯರು ಯಾವುದೇ ಸಮಸ್ಯೆಯ ಸಂದರ್ಭಗಳಲ್ಲಿ, ಯಾರಾದರೂ ನಿಮ್ಮನ್ನು ಹಿಂಬಾಲಿಸಲು ಕಂಡುಬಂದಲ್ಲಿ, ಈವ್ ಟೀಸಿಂಗ್ ಮಾಡಿದ್ದಲ್ಲಿ ಮತ್ತು ಕೀಟಲೆ ಮಾಡುವುದು ಕಂಡುಬಂದರೆ ಕೂಡಲೇ ಯಾವುದೇ ಸಂಕೋಚ ಅಥವಾ ಭಯ ಇಲ್ಲದೇ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿದ್ದಲ್ಲಿ, ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
ವಿಧ್ಯಾರ್ಥಿನಿಯರ ರಕ್ಷಣೆಗಾಗಿ ಚೆನ್ನಮ್ಮ ಪಡೆ ಯಾವುದೇ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ
ಈ ಸಂದರ್ಭದಲ್ಲಿ, ಶ್ರೀ ರಾಘವೇಂದ್ರ, ಕಮಲಾ ನೆಹರು ಸ್ಮಾಕರ, ರಾಷ್ಟ್ರೀಯ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಶ್ರೀ ವೆಂಕಟೇಶ್, ಕಸ್ತೂರ್ ಬಾ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಕಾರ್ಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶ್ರೀ ಪ್ರಕಾಶ್, ಪೊಲೀಸ್ ಉಪಾಧಿಕ್ಷಕರು,ಡಿಎಆರ್, ಶಿವಮೊಗ್ಗ, ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಕಾಲೇಜಿನ ಪ್ರಾಧ್ಯಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.