ಡಾ.ಬಾಲಕೃಷ್ಣ ಹೆಗಡೆ ಸಂತಾಪ
ಶಿವಮೊಗ್ಗ: ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನಮೋಹನ ಇಂದು ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ದಿ ಹಿಂದೂ ಪತ್ರಿಕೆಯಲ್ಲಿ ಸುಮಾರು 47 ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.
ಮೂಲತ: ಬಳ್ಳಾರಿಯವರಾಗಿದ್ದ ಇವರು 1958ರಲ್ಲಿ ಹುಬ್ಬಳ್ಳಿಗೆ ಬಂದಿದ್ದರು. ಬಳಿಕ ಸ್ವಲ್ಪ ಕಾಲ ಬೆಳಗಾವಿ, ಗೋವಾದಲ್ಲಿ ಕಾರ್ಯ ನಿರ್ವಹಿಸಿ 1968ರಲ್ಲಿ ಪುನ: ಹುಬ್ಬಳ್ಳಿಗೆ ವಾಪಸಾಗಿ 2005ರಲ್ಲಿ ನಿವೃತ್ತಿಯಾಗುವವರೆಗೂ ಹುಬ್ಬಳ್ಳಿಯಲ್ಲೇ ಇದ್ದು ಹಿರಿಯ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.
ನಿವೃತ್ತಿ ಬಳಿಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದಗದರು.
ಇಂಗ್ಲೀಷ್ ಭಾಷಾ ಪತ್ರಕರ್ತರಾದರೂ ಕನ್ನಡದಲ್ಲೂ ಬರೆಯುತ್ತಿದ್ದುದು ಅವರ ವಿಶೇಷತೆಯಾಗಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಅಧಿಕಾರ ವಿಕೇಂದ್ರೀಕರಣ, ಜಲ ಸಂಪನ್ಮೂಲ, ಪ್ರಾದೇಶಿಕ ಅಸಮಾನತೆಯ ನಿವಾರಣೆ ಅವರ ಬರವಣಿಗೆಯ ವಿಷಯವಾಗಿದ್ದವು. ವಸ್ತುನಿಷ್ಟ ವರದಿಗಾರಿಕೆಗೆ ಹೆಸರಾಗಿದ್ದರು. ನೀರಾವರಿ ಯೋಜನೆಗಳು, ಕೃಷ್ಣಾ ಜಲ ವಿವಾದದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದವರಾಗಿದ್ದರು.
ಮೃತರ ತಂದೆ ರಾಘವೇಂದ್ರ ರಾವ್ ದಿ.ಹಿಂದೂ ಪತ್ರಿಕೆಯ ಬಳ್ಳಾರಿ ವರದಿಗಾರರಾಗಿದ್ದರು ಮದನಮೋಹನ ಅವರ ಪುತ್ರ ರಾಘವ ಕೂಡ ದಿ.ಹಿಂದೂ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂತಾಪ…
ತಾವು ಹುಬ್ಬಳ್ಳಿಯಲ್ಲಿದ್ದಾಗ ಸುಮಾರು 10 ವರ್ಷಗಳ ಕಾಲ ಮದನಮೋಹನರ ಜತೆಯಲ್ಲಿ ಕೆಲಸ ಮಾಡಿದ್ದು ಅವರು ಸ್ನೇಹ ಜೀವಿ ಮತ್ತು ಸಹೃದಯಿಗಳಾಗಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಮದನಮೋಹನ ಇದ್ರು ಅಂತಾದ್ರೆ ಮುಖ್ಯ ಮಂತ್ರಿಗಳು, ಸಚಿವರು ಹೆದರುತ್ತಿದ್ದ ಕಾಲ ಅದಾಗಿತ್ತು. ಅಷ್ಟೊಂದು ನಿಖರತೆ, ಸ್ಪಷ್ಟತೆ ಅವರಲ್ಲಿತ್ತು. ಕಿರಿಯರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಭಗವಂತ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಹಿರಿಯಪತ್ರಕರ್ತ, ಇತಿಹಾಸ ಸಂಶೋಧಕರಾದ . ಬಾಲಕೃಷ್ಣ ಹೆಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ.