ಶಿವಮೊಗ್ಗ : ವಾಣಿಜ್ಯದ ವಿದ್ಯಾರ್ಥಿಗಳು ವಾಣಿಜ್ಯೋದ್ಯಮ ಹಿನ್ನಲೆಯಲ್ಲಿ ಸಿನಿಮಾದ ಪ್ರಾಮುಖ್ಯತೆ ಅರಿಯಿರಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಹೇಳಿದರು.

ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಿನಿಮಾಗಳ ವಾಣಿಜ್ಯೋದ್ಯಮ ವಿಶ್ಲೇಷಣೆ ಸ್ಪರ್ಧೆ ‘ಕಾರ್ಪೊರೇಟ್ ಟ್ಯಾಕೀಸ್’ ಕಾರ್ಯಕ್ರಮವನ್ನು ಸಿನಿಮಾ ಕ್ಲಾಪ್ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಿನಿಮಾ ಮನರಂಜನೆಗಾಗಿ ವೀಕ್ಷಿಸದೆ ಕಾಮರ್ಸ್ ವಿದ್ಯಾರ್ಥಿಗಳು ವಾಣಿಜ್ಯದ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಪ್ರಯತ್ನ ಶ್ಲಾಘನೀಯ. ಅಂತಹ ವಿಶ್ಲೇಷಣಾತ್ಮಕ ಚಿಂತನೆಗಳು ಸಿಗುವುದೇ ಪುಸ್ತಕಗಳ ಅಧ್ಯಯನದಿಂದ. ಪುಸ್ತಕ ನಮಗೆ ವಾಸ್ತವತೆಯ ಜ್ಞಾನವನ್ನು ನೀಡುತ್ತದೆ.

ಹೊಸತನದ ಚಿಂತನೆ ಮನುಷ್ಯ ಸಹಜ‌ ಗುಣ. ಅಂತಹ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳುವಂತಹ ಯಾವುದೇ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿರ್ವಹಣಾ ಕೌಶಲ್ಯತೆ ನಿಮ್ಮದಾಗಲಿ ಎಂದು ಹೇಳಿದರು.

ರಂಗಕರ್ಮಿ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ,
ನಾಟ್ಯದಿಂದ ನಾಟಕದ ಅನಾವರಣವಾಯಿತು ಎಂಬ ಮಾತಿದೆ. ನಟನೆಯಿಲ್ಲದ ನಟನೆಯೇ ಉತ್ತಮ ನಟನೆ. ಭಾರತೀಯ ಸಂಸ್ಕೃತಿಯಲ್ಲಿ ಒಂದು ನಿರ್ದಿಷ್ಟತೆಯನ್ನು ಮೀರಿ ಕಲೆ ಮತ್ತು ಸಂಗೀತದ ಮೂಲಕ ಜನ ಸಾಮಾನ್ಯರಲ್ಲಿ ಅಕ್ಷರಗಳನ್ನು ಬಿತ್ತುವ ಕೆಲಸ ಮಾಡಲಾಯಿತು, ಅದುವೇ ಪಂಚಮ ವೇದ.

ಭಾರತೀಯ ಸಿನಿಮಾಗಳಲ್ಲಿ ಹೆಚ್ಚಿನ ಆದ್ಯತೆಯನ್ನು ಚಿತ್ರಿಕರಣಕ್ಕಾಗಿ ನೀಡಲಾಗುತ್ತಿದೆ. ಅನೇಕ ಸಂದರ್ಭದಲ್ಲಿ ನಿರ್ದಿಷ್ಟ ನಟರ ಆಧಾರದ ಮೇಲೆ ಸಿನಿಮಾವನ್ನು ವಿನ್ಯಾಸಗೊಳಿಸಲಾಗುತ್ತದೆ.

ಸಿನಿಮಾದ ಏಳು ಬೀಳುಗಳು ವಿನ್ಯಾಸದ ಮೇಲೆ ನಿಂತಿದೆ. ನಾವು ಮಾಡುವ ವಿಶ್ಲೇಷಣೆಗಳು ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿರಬೇಕು. ಈ ಮೂಲಕ ನಮ್ಮ ಆಲೋಚನೆಗಳಲ್ಲಿ ಚಲನಶೀಲತೆಯನ್ನು ರೂಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು‌.

ಕಾರ್ಯಕ್ರಮದಲ್ಲಿ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬಿಕಾಂ ವಿದ್ಯಾರ್ಥಿನಿ ಸಾಕ್ಷಿ ಪ್ರಾರ್ಥಿಸಿದರು. ಮೇಘನಾ.ಎಸ್.ಆರ್ ಸ್ವಾಗತಿಸಿ, ಛಾಯಾ ನಿರೂಪಿಸಿ, ಚಿಂತನ ವಂದಿಸಿದರು. ಚಲನಚಿತ್ರ ವಿಶ್ಲೇಷಣೆಯಲ್ಲಿ ವಿವಿಧ ಕಾಲೇಜುಗಳ ಎಂಟು ತಂಡಗಳು ಭಾಗವಹಿಸಿದ್ದವು.

ವರದಿ ಪ್ರಜಾ ಶಕ್ತಿ