ಶಿವಮೊಗ್ಗ: ರಕ್ತದ ಬೆಲೆ ಗೊತ್ತಾಗುವುದು ನಮ್ಮವರಿಗೆ ತುರ್ತು ಅಗತ್ಯವಿದ್ದಾಗ ಮಾತ್ರ. ಜೀವ ಉಳಿಸುವ ಮಹತ್ತರ ಕಾರ್ಯ ಮಾಡುವ ರಕ್ತದಾನಿಗಳು ನಮ್ಮೆಲ್ಲರಿಗೂ ಮಾದರಿ ಎಂದು ದಿನಕರ್ ಹೇಳಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತದಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸಂಘ ಸಂಸ್ಥೆಗಳ ದೊಡ್ಡ ಪಾತ್ರವಿದೆ. ಇದರಿಂದ ನೂರಾರು ಜನರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
ಜೂನ್ 14ರಂದು ವಿಶ್ವಾದ್ಯಂತ ರಕ್ತದಾನಿಗಳ ಆಚರಿಸಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ರಕ್ತದಾನಿ ಇರಬೇಕು. ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಐಎಂಎ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ರಕ್ತದಾನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
75 ಬಾರಿ ರಕ್ತದಾನ ಮಾಡಿರುವ ಪ್ರಿಯದರ್ಶಿನಿ ಕಾಲೇಜಿನ ಪ್ರಾಚಾರ್ಯ ವೀರೇಶ್, 93 ಬಾರಿ ರಕ್ತದಾನ ಮಾಡಿರುವ ಪರ್ಫೆಕ್ಟ್ ಅಲಾಯ್ಸ್ನ ಮಂಜುನಾಥ್ ಹಾಗೂ ಧರಣೇಂದ್ರ ದಿನಕರ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಿಯೋಜಿತ ಅಧ್ಯಕ್ಷ ಅರುಣ್ ದೀಕ್ಷಿತ್, ಮಾಜಿ ಅಧ್ಯಕ್ಷರಾದ ಎನ್.ಎಚ್.ಶ್ರೀಕಾಂತ್, ಕಾರ್ಯದರ್ಶಿ ಕಿಶೋರ್ ಕುಮಾರ್, ನಿವೃತ್ತ ಅಧಿಕಾರಿ ಚಂದ್ರಶೇಖರಯ್ಯ, ಮುಕುಂದೇಗೌಡ, ಸಂಜೀವ್ ಕುಮಾರ್ ರೋಟರಿ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.