ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಚೌದರಿ ಎಂ.ಹೆಚ್ ಇವರು ಜೂ.20 ರಂದು ತಮ್ಮ ತಂಡದೊಂದಿಗೆ ನಗರದ ವಿವಿಧೆಡೆ ಸ್ಮಾರ್ಟ್ ಸಿಟಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.


ಲೋಕಾಯುಕ್ತ ಠಾಣೆಯ ಡಿಎಸ್‍ಪಿ ಉಮೇಶ್ ಈಶ್ವರ್ ನಾಯ್ಕ, ಪೊಲೀಸ್ ನಿರೀಕ್ಷಕರಾದ ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊಂದಿಗೆ ಗುರುವಾರ ಬೆಳಿಗ್ಗೆ ನಗರದ ಆಯನೂರು ಗೇಟ್, ದ್ವಾರಕ ಕನ್ವೆನ್ಷನ್ ಹಾಲ್ ಹತ್ತಿರ, ಆಲ್ಕೋಳ ಸರ್ಕಲ್, ವಿನೋಬನಗರದ 100 ಅಡಿ ಮುಖ್ಯ ರಸ್ತೆ, ಫ್ರೀಡಂ ಪಾರ್ಕ್, ಗಾಂಧಿನಗರ, ತಿಲಕ್‍ನಗರ, ತುಂಗಾ ನದಿ ಬಳಿ ಮತ್ತು ಇತರೆ ಪ್ರದೇಶಗಳಲ್ಲಿ ಸಂಚರಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಾದ ಡ್ರೈನೇಜ್, ರಸ್ತೆ, ಚರಂಡಿ, ಫುಟ್‍ಪಾತ್ ಇತರೆ ಕಾಮಗಾರಿಗಳನ್ನು ಪರಿಶೀಲಿಸಿದರು.


ಈ ಸಮಯದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ಮತ್ತು ಅವರ ಸಿಬ್ಬಂದಿಗಳನ್ನು ಬರ ಮಾಡಿಕೊಂಡು ಸ್ಥಳಗಳನ್ನು ಪರಿಶೀಲನೆ ಮಾಡಿ, ಅವೈಜ್ಞಾನಿಕ ಮತ್ತು ಕಳಪೆ ಡ್ರೈನೇಜ್, ಚರಂಡಿ, ರಸ್ತೆ, ಫುಟ್‍ಪಾತ್ ಕಾಮಗಾರಿಗಳನ್ನು ಗುರುತಿಸಿ ಪರಿಶೀಲಿಸಿದರು.
ಹಾಗೂ ಫುಟ್‍ಪಾತ್, ರಸ್ತೆಯ ಕಾಮಗಾರಿಳು ಅಪೂರ್ಣಗೊಂಡಿರುವುದು ಹಾಗೂ ಈಗಾಗಲೇ ದುರಸ್ತಿಯಲ್ಲಿದ್ದು ಸರಿಯಾದ ನಿರ್ವಹಣೆ ಮಾಡದೇ ಇರುವುದನ್ನು ಗಮನಿಸಿದರು. ಮತ್ತು ಸದರಿ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಗಳಿಂದ ಮಳೆ ಸಂದರ್ಭದಲ್ಲಿ ನೀರು ನಿಂತು ಹಲವಾರು ಬಡಾವಣೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಕಂಡು ಬಂದಿದ್ದು, ಸ್ಮಾರ್ಟ್‍ಸಿಟಿ ಯೋಜನೆ ಇಂಜಿನಿಯರ್‍ರವರಿಗೆ ಈ ಕಾಮಗಾರಿಗಳನ್ನು ಪುನರ್ ಪರಿಶೀಲಿಸಿ ಕಾಮಗಾರಿಗಳ ಪೂರ್ಣ ಮಾಹಿತಿಯನ್ನು ನೀಡುವಂತೆ ಪೊಲೀಸ್ ಅಧೀಕ್ಷಕರು ಸೂಚನೆ ನೀಡಿರುತ್ತಾರೆ.

ವರದಿ ಪ್ರಜಾ ಶಕ್ತಿ