ಹಾವೇರಿಯಲ್ಲಿ ಹೈವೆ ಮೇಲೆ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ಲರ್‌ವೊಂದು ಡಿಕ್ಕಿ ಹೊಡೆದು 13 ಜನರ ಸಾವಿಗೆ ಕಾರಣವಾಗಿದ್ದ ಘಟನೆ ನಡೆದು 10 ದಿನಗಳಾಗಿದ್ದು, ಇಂದು ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತರವರು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದ್ದಾರೆ.
ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಈ ಘಟನೆ ನಮಿಗೆ ಜೀರ್ಣಿಸಲಾಗುವುದಿಲ್ಲ. ಭಗವಂತ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಹೋದ ಜೀವಗಳ ನಷ್ಟ ನಾವು ತುಂಬಿಕೊಡಲಾಗುವುದಿಲ್ಲ. ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಮತ್ತೆ ಅವರ ಮುಂದಿನ ಭವಿಷ್ಯಕ್ಕೆ ನಮ್ಮ ಜಿಲ್ಲಾಧ್ಯಕ್ಷರಾದ ಪ್ರಸನ್ನಕುಮಾರ್ ಅವರಿಗೂ ಕುಟುಂಬದ ಬಗ್ಗೆ ಮಾಹಿತಿ ಪಡೆಯುತ್ತಿರುವಂತೆ ಹೇಳಿದ್ದೇವೆ ಎಂದರು.
ಶಿವರಾಜ್‌ಕುಮಾರ್ ಮಾತನಾಡಿ, ಇಂತಹ ಸಂದರ್ಭದಲ್ಲಿ ಎಲ್ಲರೂ ಸಹಾಯ ಮಾಡಬಹುದು. ಆದರೆ ಸಮಧಾನ ಮಾಡುವುದು ಕಷ್ಟ. ಈ ದುರ್ಘಟನೆಯ ನೆನಪು ಸದಾ ಕಾಡುತ್ತಿರುತ್ತದೆ. ಅದನ್ನು ಗೆಲ್ಲುವ ಶಕ್ತಿ ದೇವರು ಕೊಡಲಿ, ನೋಡಿ ಬಹಳ ದುಃಖವಾಯಿತು. ಕುಟುಂಬದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಕೂಡ ನೆರವು ನೀಡುವ ಭರವಸೆ ನೀಡುತ್ತಿದ್ದೇನೆ ಎಂದರು.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ೬೫ ಸಾವಿರವನ್ನ ನೀಡಿದೆ. ಈ ಹಿಂದೆ ನಟ ಶಿವರಾಜ್ ಕುಮಾರ್ ದಂಪತಿಗಳು ಘೋಷಿಸಿದಂತೆ ಮೃತರಿಗೆ ತಲಾ ಒಂದು ಲಕ್ಷ ರೂ. ಹಣವನ್ನೇ ನೀಡಿದರು. 13 ಜನರು ಅಪಘಾತದಲ್ಲಿ ಮೃತರಾಗಿದ್ದು 13 ಲಕ್ಷದ ರೂ ನೆರವು ನೀಡಲಾಯಿತು. ಈ ಹಣವನ್ನ ಮೃತ ವಿಶಾಲಾಕ್ಷಿ ನಾಗೇಶ್ ಕುಟುಂಬರಿಗೆ ನೀಡಲಾಯಿತು.
ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಘೋಷಿಸಲಾಗಿತ್ತು. ಅದರಲ್ಲಿ ಇಬ್ವರು ಗುಣಮುಖರಾದರೂ ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಈ ವೇಳೆ ಭದ್ರಾವತಿಯ ಶಾಸಕ ಸಂಗಮೇಶ್ವರ್ ಕೂಡ ತಲಾ 50 ಸಾವಿರ ನೆರವು ನೀಡಿ, ಶಿವರಾಜ್‌ಕುಮಾರ್ ದಂಪತಿಗಳಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮೃತರಾದ ಅರುಣ್ ಪತ್ನಿ ರೇಣುಕ ಮಾತನಾಡಿ, ನನ್ನ ಪತಿಯೇ ನನಗೆ ಆಶ್ರಯವಾಗಿದ್ದರು. ನಾನು ೩ ತಿಂಗಳ ಬಾಣಂತಿ, ನನ್ನ ಮಗುವಿನ ಭವಿಷ್ಯಕ್ಕೆ ನನಗೆ ಉದ್ಯೋಗ ಬೇಕಾಗಿದೆ. ಹಿಂದೆ ಕೂಡ ನಾನು ನನಗೆ ಉದ್ಯೋಗ ಕೊಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆ. ಸಚಿವ ಮಧುಬಂಗಾರಪ್ಪ ಮತ್ತು ಇದೀಗ ಗೀತಾ ಶಿವರಾಜ್‌ಕುಮಾರ್ ಅವರು ಕೂಡ ಭರವಸೆ ನೀಡಿದ್ದಾರೆ. ಮುಂದಿನ ಭವಿಷ್ಯಕ್ಕೂ ಸಹಕಾರ ನೀಡುವುದಾಗಿ ಅವರ ವೈಯುಕ್ತಿಕ ದೂರವಾಣಿ ನಂಬರ್‌ನ್ನು ಕೂಡ ನೀಡಿದ್ದು, ಯಾವುದೇ ಸಂದರ್ಭದಲ್ಲೂ ಕೂಡ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಮ್ಮೆಹಟ್ಟಿ ಗ್ರಾಮದ ಮುಖಂಡರು ಮತ್ತು ಭದ್ರಾವತಿ ಶಾಸಕರಾದ ಸಂಗಮೇಶ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಕಲ್ಗೂಡು ರತ್ನಾಕರ್ ಶ್ರೀನಿವಾಸ್ ಕರಿಯಣ್ಣ ಜಿ.ಡಿ. ಮಂಜುನಾಥ್ ಮತ್ತಿತರರಿದ್ದರು.