ಶಿವಮೊಗ್ಗ ನಗರದ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ, ಸಂಚಾರ ನಿಯಮಗಳು, ಮಾದಕ ದ್ರವ್ಯದ ದುಷ್ಪರಿಣಾಮ ಮತ್ತು ಸೈಬರ್ ಅಪರಾಧಗಳ ಕುರಿತು ಕಾನೂನು –ಅಪರಾಧ - ಜಾಗೃತಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದು, ಶ್ರೀ ರುದ್ರಪ್ಪ ಗೌಡ ಕೊಳಲೆ, ಅಧ್ಯಕ್ಷರು ಡಿವಿಎಸ್, ಕಾಲೇಜುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಕಾರ್ಯಕ್ರಮ ಉದ್ಘಾಟನೆಯ ನಂತರ ಮಾನ್ಯ ಪೊಲೀಸ್ ಅಧೀಕ್ಷಕರು ಕಾಲೇಜಿನ ವಿಧ್ಯಾರ್ಥಿಗಳ ಕುರಿತು ಮಾತನಾಡಿ ಈ ಕೆಳಕಂಡ ಸಲಹೆಗಳನ್ನು ನೀಡಿರುತ್ತಾರೆ.

1) ಹದಿಹರೆಯದ ವಯಸ್ಸಿನವರಿಗೆ ಮತ್ತು ವಿಧ್ಯಾರ್ಥಿಗಳಿಗೆ ಕಾನೂನಿನ ಅರಿವು ಅತ್ಯವಶ್ಯಕವಾಗಿರುತ್ತದೆ. ಪ್ರತಿಯೊಬ್ಬರು ಕಾನೂನಿನ ಬಗ್ಗೆ ತಿಳಿದುಕೊಂಡು, ಕಾನೂನನ್ನು ಗೌರವಿಸಿ ಪಾಲನೆ ಮಾಡುವುದು ನಮ್ಮೆಲ್ಲರ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಕಾನೂನಿನ ದೃಷ್ಠಿಯಲ್ಲಿ 18 ವರ್ಷದೊಳಗಿನ ಪ್ರತಿಯೊಬ್ಬರು ಮಕ್ಕಳೆಂದು ಮತ್ತು 18 ವರ್ಷ ಮೇಲ್ಪಟ್ಟವರನ್ನು ವಯಸ್ಕರೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ವಯಸ್ಸಿನಲ್ಲಿ ಕಾನೂನುಗಳ ಬಗ್ಗೆ ಅರಿವು ಇರುವುದು ತುಂಬಾ ಮುಖ್ಯವಾಗಿರುತ್ತದೆ.

2) ಕಾನೂನಿಗೆ ಪ್ರಮುಖವಾಗಿ ಎರಡು ಆಯಾಮಗಳಿರುತ್ತದೆ. ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಮತ್ತು ದುರ್ಬಲ ವರ್ಗದ ರಕ್ಷಣೆ. ಈ ಎರಡೂ ಮೂಲೋದ್ದೇಶದಿಂದಲೇ ಕಾನೂನು ಜಾರಿಗೆ ತರಲಾಗುತ್ತದೆ. ಕಾನೂನಿನಲ್ಲಿ ಸೂಚಿಸಿರುವ ಶಿಸ್ತು ಮತ್ತು ಕ್ರಮ ಬದ್ದತೆಯನ್ನು ತಿಳಿದು ಎಲ್ಲರೂ ಕಡ್ಡಾಯವಾಗಿ ಕಾನೂನಿಗೆ ವಿಧೇಯರಾಗಿರಬೇಕು ಹಾಗೂ ಪಾಲನೆ ಮಾಡಬೇಕು. ಒಂದು ವೇಳೆ ಸಾರ್ವಜನಿಕರು ಕಾನೂನನ್ನು ಪಾಲನೆ ಮಾಡದೇ ಉಲ್ಲಂಘನೆ ಮಾಡಿದಲ್ಲಿ ಅವರುಗಳೇ ತೊಂದರೆಗೆ ಒಳಗಾಗುತ್ತಾರೆ.

3) ಈ ಕಾರ್ಯಾಗಾರದಲ್ಲಿ ಸೈಬರ್ ಕ್ರೈಂ, ಮಾದಕ ವಸ್ತು, ಸಂಚಾರ ನಿಯಮ ಮತ್ತು ಪೋಕ್ಸೋ ಕಾಯ್ದೆಗಳ ಬಗ್ಗೆ ತಿಳಿಸಿಕೊಡಲಿದ್ದು, ಮೊಬೈಲ್ ಎಂಬುದು ಸಂವಹನಕ್ಕೆ ಬಳಸುವ ಸಾಧನವಾಗಿದ್ದು, ಇದನ್ನು ಬಳಸುವಾಗ ಉಪಯೋಗದ ಜೊತೆಗೆ ದುರಪಯೋಗಗಳು ಕೂಡ ಇರುತ್ತವೆ. ಆದ್ದರಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಿ ಸುರಕ್ಷತವಾಗಿ ಬಳಕೆ ಮಾಡಿ.

4) ಸೈಬರ್ ಅಪರಾಧಗಳ ಬಗ್ಗೆ ನಮ್ಮಲ್ಲಿರುವ ಅರಿವಿನ ಕೊರತೆಯಿಂದಾಗಿ ವರ್ಷದಿಂದ ವರ್ಷಗಳು ಕಳೆದಂತೆ ಸೈಬರ್ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಹೆಚ್ಚಿನದಾಗಿ ವಿಧ್ಯಾವಂತರೇ ಸೈಬರ್ ಅಪರಾದಗಳಿಗೆ ಒಳಗಾಗುತ್ತಿದ್ದು, ಆದ್ದರಿಂದ ಯಾರಾದರೂ ತಮ್ಮನ್ನು ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿ ಓಟಿಪಿ, ಬ್ಯಾಂಕ್ ನ ವಿವರ, ಆಧಾರ್ ಕಾರ್ಡ್ ವಿವರ, ಕೆವೈಸಿ ವಿವರಗಳನ್ನು ಕೇಳಿದಾಗ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಇದರಿಂದ ನೀವೆ ತೊಂದರೆಗೆ ಒಳಗಾಗಬೇಕಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಖಚಿತ ಪಡಿಸಿಕೊಳ್ಳುವುದು ಸೂಕ್ತವಿರುತ್ತದೆ.

5) ಈಗಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್, ಆನ್ ಲೈನ್ ಹಾಗೂ ಇಂಟರ್ ನೆಟ್ ವ್ಯವಸ್ಥೆಯಿಂದ ನಾವು ಕುಳಿತಿರುವ ಜಾಗದಲ್ಲಿಯೇ ಇದ್ದುಕೊಂಡು ಪ್ರಪಂಚದ ಯಾವುದೇ ವಿಧ್ಯಮಾನಗಳು / ಮಾಹಿತಿಯನ್ನು ತಿಳಿಯಲು ಸಾಧ್ಯವಿರುತ್ತದೆ. ಆದರೆ ನಾವು ಹೇಗೆ ಸುರಕ್ಷಿತವಾಗೊರಬೇಕೆಂಬ ಬಗ್ಗೆ ತಿಳಿದುಕೊಂಡು ಬಳಕೆ ಮಾಡಬೇಕಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ನಖಲಿ ಖಾತೆಗಳನ್ನು ತೆರೆದು Friend List ನಲ್ಲಿರುವ ವ್ಯಕ್ತಿಗಳಿಗೆ ಹಣಕ್ಕಾಗಿ ಬೇಡಿಕೆ, ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಹಾಗೂ ಇತರೆ ಸುಳ್ಳು ವಿಚಾರಗಳನ್ನು ಕಳುಹಿಸುತ್ತಾರೆ. ಆದ್ದರಿಂದ Friend Request ಗಳಿಗೆ Accept ಕೊಡುವಾಗ ಎಚ್ಚರಿಕೆಯಿಂದ ನೋಡಿ ನಿಮಗೆ ಪರಿಚಯವಿರುವ ವ್ಯಕ್ತಿಗಳ ಬಗ್ಗೆ ಖಾತರೀ ಪಡಿಸಕೊಂಡು Accept ಮಾಡಿ.

6) ಮಾದಕ ದ್ರವ್ಯವು ಜಾಗತಿಕ ಪಿಡುಗಾಗಿದ್ದು, ಮಾದಕ ದ್ರವ್ಯ ಸೇವನೆ, ಮಾರಾಟ, ಸಂಗ್ರಹಣೆ ಮತ್ತು ಬೆಳೆಯುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಮಾದಕ ದ್ರವ್ಯಗಳು ಮೊದಲು ಮನಸ್ಸಿಗೆ ಮುದ ನೀಡುತ್ತವೆ, ಆದರೆ ದಿನಕಳೆದಂತೆ ಅದರ ದಾಸ್ಯಕ್ಕೆ ಒಳಗಾಗಿ, ವ್ಯಸನಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರ ದುಷ್ಪರಿಣಾಮವನ್ನು ಬೀರುತ್ತವೆ. ಇದರಿಂದ ನಮ್ಮ ಸುತ್ತಮುತ್ತಲಿನ ಸಮಾಜದ ಮೇಲೂ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

7) ಈ ಕಾರ್ಯಕ್ರಮ ನಡೆಸಿದ ಉದ್ದೇಶ ಸಾಕಾರವಾಗಬೇಕಿದ್ದಲ್ಲಿ, ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರುಗಳಿಗೆ ಮಾಹಿತಿ ನೀಡಿ. ನಿಮ್ಮ ಸುತ್ತ ಮುತ್ತ ಯಾರಾದರೂ ಮಾದಕ ದ್ರವ್ಯ ಸೇವನೆ, ಮಾರಾಟ, ಸಂಗ್ರಹಣೆ ಮತ್ತು ಬೆಳೆಯುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ / 112 ERSS ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ.

8) ಪ್ರತಿಯೊಬ್ಬ ವ್ಯಕ್ತಿಯ ಜೀವನ ಚಕ್ರದಲ್ಲಿ ವಿಧ್ಯಾರ್ಥಿ ಜೀವನವು ಪ್ರಮುಖ ಹಂತವಾಗಿರುತ್ತದೆ. ಈ ಹಂತದಲ್ಲಿ ನೀವು ಇಡುವ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದಿಡಿ. ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಮುಂದಿನ ಜೀವನವನ್ನು ರೂಪಿಸುತ್ತವೆ. ಆದ್ದರಿಂದ ನಿಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಬಗ್ಗೆ ಮುತುವರ್ಜಿ ವಹಿಸಿ.

9) ಪ್ರತಿಯೊಬ್ಬ ನಾಗರೀಕನು ಸಮಾಜದ ಬೆನ್ನೆಲುಬಾಗಿದ್ದು, ವಿಧ್ಯಾರ್ಥಿ ಜೀವನದಲ್ಲಿ ನೀವೆಷ್ಟು ಕಾಳಜಿಯಿಂದ ನಿಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೀರೋ, ಅದರ ಆಧಾರದ ಮೇಲೆ ಸದೃಡ ಸಮಾಜದ ಭವಿಷ್ಯ ನಿರ್ಧಾರವಾಗಲಿದೆ. ಆದ್ದರಿಂದ ವಿಧ್ಯಾರ್ಥಿ ಜೀವನದಲ್ಲಿ ಗುರು ಹಿರಿಯರ ಮಾತು ಕೇಳಿ, ಸಾಧಿಸ ಬೇಕಾದ ಮುಂದಿನ ಗುರಿಗಳ ಬಗ್ಗೆ ಮಾತ್ರ ಗಮನ ಹರಿಸಿ ಶಿಕ್ಷಣ ಪಡೆಯುವುದು ಮುಖ್ಯವಾಗಿರುತ್ತದೆ.

ಜೀವನದುದ್ದಕ್ಕೂ ಉತ್ತಮ ಆದರ್ಶಗಳನ್ನು ಅಳವಡಿಸಿಕೊಳ್ಳಿ, ಶ್ರದ್ಧೆವಹಿಸಿ ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಹೇಳಿದರು.

ಸದರಿ ಕಾರ್ಯಕ್ರಮದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ರಾಜಶೇಖರ್ ಎಸ್, ಕಾರ್ಯದರ್ಶಿಗಳು, ಡಿವಿಎಸ್, ಕಾಲೇಜು, ಸಹ ಕಾರ್ಯದರ್ಶಿಗಳು ಡಾ ಸತೀಶ್ ಕುಮಾರ್ ಶೆಟ್ಟಿ ,ಶ್ರೀ ಎ. ಇ. ರಾಜಶೇಖರ್ ಪ್ರಾಂಶುಪಾಲರು, ಡಿವಿಎಸ್, ಕಾಲೇಜು, ಶ್ರೀ ಹೆಚ್ ಸಿ ಉಮೇಶ್ ಪ್ರಾಧ್ಯಾಪಕರು ಡಿವಿಎಸ್, ಕಾಲೇಜು ಹಾಗೂ ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ