ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾಡಳಿತ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ
ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆಯನ್ನು ಹಮ್ಮಿಕೊಂಡಿದ್ದು ಶ್ರೀ ಗುರುದತ್ ಹೆಗ್ಡೆ ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸಭೆಯ ಅಧ್ಯಕ್ಷತೆಯನ್ನುವಹಿಸಿದ್ದು, ಶ್ರೀ ಚನ್ನಬಸಪ್ಪ, ಶಾಸಕರು, ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಮಾನ್ಯ ಜಿಲ್ಲಾಧಿಕಾರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಮುಖಂಡರು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ್ದು, ಇವುಗಳನ್ನು ಗಂಭೀರವಾಗಿ ಪರಿಗಳಣಿಸಲಾಗಿದೆ ಹಾಗೂ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಎಲ್ಲಾ ರೀತಿಯ ಸಹಕಾರ ನೀಡಲಿದೆ.
2) ಈ ಹಿಂದಿನಿಂದಲೂ ಎಲ್ಲಾರೂ ಸೇರಿ ಖುಷಿಯಿಂದ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದು, ಆದರೆ ಯಾರೋ ಕೆಲವು ಜನ ಕಿಡಿಗೇಡಿಗಳು ಮಾಡುವ ಕಿಡಿಗೇಡಿತನದಿಂದ ಇಡೀ ಜಿಲ್ಲೆಯ ಹೆಸರು ಹಾಳಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಈಗಾಗಲೇ ಈ ರೀತಿ ಸಮಸ್ಯೆಗಳನ್ನುಂಟು ಮಾಡುವ ಕಿಡಿಗೇಡಿಗಳನ್ನು ಗುರುತಿಸಿ ಅವುರುಗಳ ವಿರುದ್ಧ ಗೂಂಡಾ ಹಾಗೂ ಗಡಿಪಾರು ಕಾಯ್ದೆ ಮತ್ತು ಮುಂಜಾಗ್ರತಾ ಕ್ರಮಗಳಡಿ ಕ್ರಮ ಕೈಗೊಳ್ಳಲಾಗಿದೆ.
3) ಕುವೆಂಪು ರವರ ವಿಶ್ವ ಮಾನವ ಸಂದೇಶವನ್ನು ಸಾರಿದ ಜಿಲ್ಲೆ ಇದಾಗಿದ್ದು, ಹಬ್ಬವೆಂದರೆ ಕೇವಲ ಫ್ಲೆಕ್ಸ್ ಗಳನ್ನು ಹಾಕುವುದು, ಬೈಕ್ ರ‍್ಯಾಲಿ ನಡೆಸುವುದು, ಪೈಪೋಟಿಗಿಳಿದಂತೆ ಒಬ್ಬರಿಗಿಂತ ಒಬ್ಬರು ದೊಡ್ಡ ಮೂರ್ತಿಗಳನ್ನು ಪ್ರತಿಷಾಪಿಸುವುದಲ್ಲ. ಬದಲಾಗಿ ಹಬ್ಬದ ಆಚರಣೆಗಳ ಬಗ್ಗೆ ತಿಳಿದುಕೊಂಡು ಒಬ್ಬರ ಮೇಲುಬ್ಬರು ಸ್ಪರ್ಧೆ ಮಾಡದೇ ತಮ್ಮ ಜವಾಬ್ದಾರಿಗಳನ್ನು ಅರಿತು ಹಬ್ಬ ಆಚರಿಸಿ.
4) ಪರಿಸರ ಸಂರಕ್ಷಣೆಯ ದೃಷ್ಠಿಯಿಂದ ಪಿ.ಓ.ಪಿ / ರಾಸಾಯನಿಕ ಬಣ್ಣಗಳನ್ನು ಬಳಸಿ ತಯಾರಿಸಿದ ಗಣಪತಿ ಮೂರ್ತಿಗಳ ಬದಲಾಗಿ, ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡಿ ಹಾಗೂ ಹಬ್ಬದ ಆಚರಣೆಯಲ್ಲಿ ಅಪಾಯಕಾರಕ ಮತ್ತು ಹೆಚ್ಚು ಶಬ್ದಗಳನ್ನುಂಟು ಮಾಡುವ ಪಟಾಕಿಗಳನ್ನು ಸಿಡಿಸದೇ ಪರಿಸರ ಸ್ನೇಹಿ (Green Cracker) ಗಳನ್ನು ಮಾತ್ರ ಬಳಸಿ*
5) ಸಡಗರ ಮತ್ತು ಸಂಭ್ರಮದಿಂದ ಹಬ್ಬ ಆಚರಿಸುವಂತಹ ವಾತಾವರಣ ನಿರ್ಮಾಣ ದೃಷ್ಠಿಯಿಂದ ಮುಖಂಡರು ಮತ್ತು ಹಿರಿಯರು ಯುವಕರಿಗೆ ಕಾನೂನು ಉಲ್ಲಂಘನೆ ಮಾಡದಂತೆ ತಿಳುವಳಿಕೆ ಹೇಳಿ ಹಾಗೂ ಸರಿಯಾದ ಮಾರ್ಗದರ್ಶನ ನೀಡಿ ಎಂದು ತಿಳಿಸಿ.
ಎಲ್ಲರೂ ತಮ್ಮ ಜವಾಬ್ದರಿಯನ್ನು ಅರಿತು, ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಣೆ ಮಾಡೋಣ ಎಂದು ಹೇಳಿದರು.
ಮಾನ್ಯ ಪೊಲೀಸ್ ಅಧೀಕ್ಷಕರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಹಬ್ಬ ಎನ್ನುವುದು ಒಂದು ಸಾಂಪ್ರದಾಯಿಕ ಆಚರಣೆಯಾಗಿರುತ್ತದೆ. ಯಾವುದೇ ಹಬ್ಬಗಳಾಗಲಿ ಅವುಗಳನ್ನು ಆಚರಣೆ ಮಾಡಲು ಅದರದೇ ಆದ ಪದ್ಧತಿಗಳಿರುತ್ತವೆ. ಹಬ್ಬಗಳ ಮಹತ್ವ ಮತ್ತು ಹಿನ್ನೆಲೆಯನ್ನು ತಿಳಿದು ಹಿಂದಿನಿಂದ ಬಂದಿರುವ ಪದ್ಧತಿಗಳನ್ನು ಅನುಸರಿಸಿ ಹಬ್ಬಗಳನ್ನು ಆಚರಣೆ ಮಾಡಬೇಕೇ ಹೊರತು, ಇನ್ನೊಬ್ಬರಿಗೆ ತೋರಿಕೆ ಮಾಡುವ ಉದ್ದೇಶದಿಂದ ಯಾವುದೇ ಹಬ್ಬ ಆಚರಣೆ ಮಾಡಬಾರದು.
2) ಈ ಬಾರಿ ಜಿಲ್ಲೆಯಾಂದ್ಯಂತ ಸುಮಾರು 3500 ಕ್ಕೂ ಹೆಚ್ಚು ಗಣಪತಿ ಮೂರ್ತಿಗಳ ಪ್ರತಿಷ್ಠಾನೆ ಮಾಡಲಿದ್ದು, ಅದೇ ರೀತಿ ಈದ್ ಮಿಲಾದ್ ಹಬ್ಬವನ್ನು ಸಹಾ ಜಿಲ್ಲೆಯಾದ್ಯಂತ ಆಚರಿಸಲಿದ್ದಾರೆ. ಸದರಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಎಲ್ಲಾ ರೀತಿ ಸಹಕಾರವನ್ನು ನೀಡಲಿದ್ದು, ಕಾನೂನು ಚೌಕಟ್ಟಿನ ಒಳಗೆ ಮಾಡುವ ಆಚರಣೆಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸಂಪೂರ್ಣ ಬೆಂಬಲವಿರುತ್ತದೆ.
3) ಲಕ್ಷಾಂತರ ಜನರು ಸೇರಿಕೊಂಡು ಖುಷಿಯಿಂದ ಹಬ್ಬವನ್ನು ಆಚರಣೆ ಮಾಡುವಾಗ ಯಾವುದೋ ಕೆಲವು ಜನ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಉಳಿದ ಸಾರ್ವಜನಿಕರ ಮನಸ್ಸಿಗೆ ಮತ್ತು ಧಾರ್ಮಿಕ ಆಚರಣೆಗೆ ಕುಂದುಂಟಾಗುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಯು ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಠಿಯಿಂದ ಕಿಡಿಗೇಡಿಗಳ ಮೇಲೆ ತೀವ್ರಾ ನಿಗಾ ಇರಿಸಿದ್ದು, ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುತ್ತಿದೆ.
4) ಯಾವುದೇ ತೊಂದರೆ / ಸಮಸ್ಯೆಗಳ ಬಗ್ಗೆ ಸಾರ್ವನಿಕರಿಂದ ದೂರು ಬಂದಾಗ ಮತ್ತು ಇತರರ ಭಾವನೆಗಳಿಗೆ ದಕ್ಕೆಯಾಗುವಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆಯು ಮಧ್ಯಪ್ರವೇಶಿಸುತ್ತದೆ ಹಾಗೂ ಸಾರ್ವಜನಿಕರ ಹಿತಿ ದೃಷ್ಠಿಯಿಂದ ಕೆಲವು ನಿರ್ಭಂಧಗಳನ್ನು ವಿಧಿಸುತ್ತದೆ. ಆದ್ದರಿಂದ ಹಬ್ಬದ ಹಿನ್ನೆಲೆಯಲ್ಲಿ ಹಾಕುವ ಬಂಟಿಂಗ್ಸ್ ಮತ್ತು ಬ್ಯಾನರ್ಸ್ ಗಳಲ್ಲಿ ಹಬ್ಬದ ವಿಚಾರಗಳು / ಶುಭಾಷಯಗಳನ್ನು ಹೊರತು ಪಡಿಸಿ ಇತರೆ ಯಾವುದೇ ಆಕ್ಷೇಪಾರ್ಹ / ಪ್ರಚೋದನಾಕಾರಿ ಮಾಹಿತಿ / ಫೋಟೋಗಳನ್ನು ಹಾಕಬೇಡಿ. ಹಬ್ಬದ ಮಹತ್ವ ತಿಳಿದುಕೊಂಡು, ಹಬ್ಬಕ್ಕೆ ಸಂಬಂದಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಗಳನ್ನು ಮಾತ್ರ ಅಳವಡಿಸಿ.
5) ಯಾವುದೇ ಒಂದು ಪ್ರದೇಶದಲ್ಲಿ ಅಹಿತಕರ ಘಟನೆಗಳು ಜರುಗಿದಾಗ, ಬೇರೆಯವರು ಆ ಪ್ರದೇಶವನ್ನು ಅಲ್ಲಿ ನಡೆದ ಘಟನೆಗೆ ಹೋಲಿಸಿ ಗುರುತಿಸುತ್ತಾರೆ. ಇದರಿಂದಾಗಿ ಆ ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸ್ವತಃ ಅಲ್ಲಿನ ಜನರೇ ಇದಕ್ಕೆ ನೇರ ಕಾರಣರಾಗುತ್ತಾರೆ. ಯಾರದೋ ಮಾತು ಕೇಳಿ, ಆ ಕ್ಷಣದ ಉದ್ವೇಗಕ್ಕೆ ಒಳಗಾಗಿ ಅತಿರೇಕದ ವರ್ತನೆ ಮಾಡಬೇಡಿ. ಇದರಿಂದ ನೀವು ಮತ್ತು ನಿಮ್ಮ ಹತ್ತಿರದವರೇ ತೊಂದರೆಗೆ ಗುರಿಯಾಗುವಂತಾಗುತ್ತದೆ.
6) ಹಬ್ಬದ ಮೆರವಣಿಗೆಯನ್ನು ಶಾಂತ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಮತ್ತು ಮೆರವಣಿಗೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಹಿತ ಪಾಕಾಡುವ ದೃಷ್ಠಿಯಿಂದ ಕಳೆದ ಬಾರಿಯ ಮೆರವಣಿಗೆಗಳಿಗೆ ಸಮಯದಲ್ಲಿ ಚಿತ್ರೀಕರಿಸಲಾದ ವಿಡಿಯೋಗಳನ್ನು ವೀಕ್ಷಿಸಿ ಅತಿರೇಕದ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವಂತಹ ವರ್ತನೆ ಮಾಡಿರುವ 560 ಕ್ಕೂ ಹೆಚ್ಚು ಜನರನ್ನು ಹಾಗೂ ಸಾರ್ವಜನಿಕ ಉಪಟಳ / ಸಮಸ್ಯೆಯನ್ನುಂಟು ಮಾಡುವ 1050 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಗುರುತಿಸಿ ಅವರುಗಳನ್ನು ಠಾಣೆಗೆ ಕರೆಸಿ, ಮುಂಜಾಗ್ರತಾ ಕ್ರಮಗಳ ಅಡಿ ಹಾಗೂ ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
7) ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ, ಬೀದಿ ದೀಪಗಳ ದುರಸ್ಥಿ ಮತ್ತು ಅಳವಡಿಸುವ ಕುರಿತು ಹಾಗೂ ಗಣೇಶ ಮೂರ್ತಿಗಳ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಗಣೇಶ ಹಾಗೂ ಈದ್ ಮಿಲಾದ್ ಮೆರವಣಿಗೆಗಳಲ್ಲಿ ಸುರಕ್ಷತಾ ದೃಷ್ಠಿಯಿಂದ ಮೂಲಭೂತ ಸೌಕರ್ಯ, ಸ್ವಚ್ಛತೆ, ಬ್ಯಾರಿಕೇಡಿಂಗ್ ಮತ್ತು ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ.
8) ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಎಲ್ಲಾ ಹಂತದ ಅಧಿಕಾರಿಗಳು ಕಳೆದ ಒಂದವರೆ ತಿಂಗಳಿನಿಂದ ಶ್ರಮಿಸಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳು ಮತ್ತು ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿರುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳ, ಸಾರ್ವಜನಿಕರ ಹಾಗೂ ಮುಖಂಡರುಗಳ ಪಾತ್ರ ಅತಿ ಪ್ರಮುಖವಾಗಿರುತ್ತದೆ. ಎಲ್ಲರೂ ಸೇರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಹಾಗೂ ಜಿಲ್ಲೆಯ ಎಲ್ಲಾ ನಾಗರೀಕರಿಗೆ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಷಯಗಳನ್ನು ತಿಳಿಸಿದರು.
ಶ್ರೀ ಎಸ್. ಎನ್. ಚನ್ನಬಸಪ್ಪ, ಮಾನ್ಯ ಶಾಸಕರು, ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ ರವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬರುತ್ತಿವೆ. ಎಲ್ಲರೂ ಸೇರಿ ಶಾಂತಿ ಮತ್ತು ಸಹಬಾಳ್ವೆಯಿಂದ ಒಟ್ಟಾಗಿ ಹೋಗೋಣ. ಸಮಾಜದಲ್ಲಿ ಭಯದ ವಾತಾವರಣ ಸೃಷ್ಠಿಸಿ ಶಾಂತಿ ಕದಡುವ ಕೆಲಸ ಮಾಡುವ ಕಿಡಿಗೆಡಿಗಳನ್ನು ನಿಯಂತ್ರಿಸಲು ಕಾನೂನು ರೀತಿಯಲ್ಲಿ ತೆಗೆದು ಕೊಳ್ಳುವ ಕಟ್ಟುನಿಟ್ಟಿನ ಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ. ನಿಬಂಧನೆಗಳಿಂದ ಹಬ್ಬಗಳನ್ನು ಆಚರಿಸುವಂತೆ ಆಗಬಾರದು. ಸಂಭ್ರಮದಿಂದ ಆಚರಣೆ ಮಾಡುವಂತಾಗಬೇಕು ಎಂದು ಹೇಳಿದರು.
ಶ್ರೀಮತಿ ಬಲ್ಕಿಷ್ ಬಾನು, ವಿಧಾನ ಪರಿಷತ್ ಸದಸ್ಯರವರು ಸಭೆಯನ್ನು ಕುರಿತು ಮಾತನಾಡಿ ಯಾವುದೇ ಧರ್ಮಗಳು ಗಲಭೆಯನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳು ಶಾಂತಿಯನ್ನು ಸಾರುತ್ತವೆ. ಮನುಷ್ಯರಾದ ನಾವು ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಹಾಗೂ ಬಸವಣ್ಣನವರು ಸಾರಿದ ತತ್ವದಂತೆ ಮಾನವೀಯತೆಯೇ ಶ್ರೇಷ್ಠ ಧರ್ಮ ಎನ್ನುವುದನ್ನು ಅರಿಯಬೇಕಾಗಿದೆ. ಈ ಹಿಂದೆ ನಡೆದಿರುವ ಘಟನೆಗಳ ಆಧಾರದ ಮೇಲೆ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡಿ ಹಾಗೂ ಹಿರಿಯರು ಮತ್ತು ಮುಖಂಡರುಗಳು ಯುವಕರನ್ನು ನಿಯಂತ್ರಿಸುವ ಮತ್ತು ಅವರ ಸರಿ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡಬೇಕು. ಹಬ್ಬಗಳ ಆಚರಣೆಯಲ್ಲಿ ಸರ್ವ ಧರ್ಮದವರೂ ಭಾವಗಹಿಸಿ ಪ್ರೀತಿ ವಿಶ್ವಾಸ ಹಾಗೂ ಶಾಂತಿಯಿಂದ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.
ಸದರಿ ಸಭೆಯಲ್ಲಿ ಶ್ರೀ ದನಂಜಯ್ ಸರ್ಜಿ, ಎಂಎಲ್.ಸಿ, ಶ್ರೀ ಸಿದ್ದಲಿಂಗ ರೆಡ್ಡಿ, ಎಡಿಸಿ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶ್ರೀ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶ್ರೀ ರವಿ ಕುಮಾರ್ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಕರ್ನಾಟಕ ರಾಜ್ಯ, ಶ್ರೀಮತಿ ಕವಿತಾ ಯೋಗಪ್ಪ ನವರ್, ಮಹಾನಗರ ಪಾಲಿಕೆ ಆಯುಕ್ತರು, ಕು. ದೃಷ್ಠಿ ಪ್ರೈ ಐಎಎಸ್, ಶಿವಮೊಗ್ಗ ಜಿಲ್ಲೆಯ ಗಣೇಶ ಪ್ರತಿಷ್ಠಾಪನಾ ಸಮಿತಿ ಹಾಗೂ ಈದ್ ಮಿಲಾದ್ ಸಮಿತಿ ಸದಸ್ಯರು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಮಾದ್ಯಮ ಮಿತ್ರರು ಉಪಸ್ಥಿತರಿದ್ದರು.