ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಪ್ರೆಸ್ ಟ್ರಸ್ಟ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದಿಸಿದರು.ಶಿವಮೊಗ್ಗ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ಮಾಡಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) ಅಡಿಯಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಶಿವಮೊಗ್ಗ ಮಹಾನಗರವನ್ನು ಆಯ್ಕೆ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದರು.
ಭಾರತ ಸರ್ಕಾರವು ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) 28,602 ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ ದೇಶದ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸಲು ಅನುಮೋದನೆಯನ್ನು ನೀಡಿದೆ. ಈ ಯೋಜನೆಯ 10 ರಾಜ್ಯಗಳಲ್ಲಿ ವ್ಯಾಪಿಸಿದ್ದು, 1 ಮಿಲಿಯನ್ ಪ್ರತ್ಯಕ್ಷ ಉದ್ಯೋಗಗಳನ್ನು ಮತ್ತು 3 ಮಿಲಿಯನ್ ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿರುವುದು ದೇಶದ ಅಭಿವೃದ್ದಿಗೆ ಹಿಡಿದ ಕೈಗನ್ನಡಿಯಾಗಿದೆ ಮತ್ತು ದೇಶವೇ ಹರ್ಷಿಸುವ ಸಂಗತಿಯಾಗಿದೆ.
ಕರ್ನಾಟಕ ರಾಜ್ಯವು ಸಹ ಕೈಗಾರಿಕೆ ಕ್ಷೇತ್ರಕ್ಕೆ ಸಾಕಷ್ಟು ರೀತಿಯ ಕೊಡುಗೆಯನ್ನು ನೀಡಿದೆ. ಹೊಸ ಹೊಸ ಕೈಗಾರಿಕೆಗಳನ್ನು ಸ್ಪಾಪಿಸಲು ಪೂರಕವಾದ ಸಂಪತ್ತು ನಮ್ಮ ರಾಜ್ಯದಲ್ಲಿದೆ. ಅದರಲ್ಲೂ ಕರ್ನಾಟಕ ರಾಜ್ಯದ ಹೃದಯ ಭಾಗದಲ್ಲಿರುವ ಶಿವಮೊಗ್ಗ ಮಹಾನಗರವು ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಮಲೆನಾಡಿನ ಗುಡ್ಡಗಾಡು ಪ್ರದೇಶದ ಪ್ರವೇಶ ದ್ವಾರದಲ್ಲಿರುವ ಶಿವಮೊಗ್ಗವನ್ನು ಸಾಮಾನ್ಯವಾಗಿ “ಮಲೆನಾಡಿನ ಹೆಬ್ಬಾಗಿಲು” ಎಂದು ಕರೆಯಲಾಗುತ್ತದೆ. ಈ ನಗರವು ತುಂಗಾ ನದಿಯ ದಡದಲ್ಲಿದೆ. ಜಿಲ್ಲೆಯಲ್ಲಿ ಹರಿಯುವ ತುಂಗಾ, ಭದ್ರಾ, ವರದಾ, ಶರಾವತಿ ನದಿಗಳೊಂದಿಗೆ ಪ್ರಾಕೃತಿಕ ಸಂಪತ್ತಿನ ಗಣಿಯಾಗಿದೆ. ಶಿವಮೊಗ್ಗವು ಶಿಕ್ಷಣ ಸಾಹಿತ್ಯ, ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ, ವಾಣಿಜ್ಯ ವ್ಯವಹಾರ, ಪ್ರವಾಸೋದ್ಯಮ, ಸಣ್ಣ ಮತ್ತು ಬೃಹತ್ ಕೈಗಾರಿಗೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ವಾಂಗೀಣವಾಗಿ ತನ್ನದೇ ಆದ ಮಹೋನ್ನತ ಛಾಪನ್ನು ಮೂಡಿಸಿದ ಭೂಮಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಆರ್ಥಿಕತೆಯು ಪ್ರಾಥಮಿಕವಾಗಿ ಕೃಷಿಯಿಂದ ನಡೆಸಲ್ಪಡುತ್ತದೆ. ಅಡಿಕೆ, ಭತ್ತ ಮತ್ತು ಮಸಾಲೆ ಪದಾರ್ಥಗಳ ಕೃಷಿಗೆ ಹೆಸರುವಾಸಿಯಾಗಿದೆ. ಕಬ್ಬಿಣದ ಅದಿರು ಗಣಿಗಾರಿಕೆ, ಉತ್ಪಾದನೆಯಂತಹ ಕೈಗಾರಿಕೆಗಳನ್ನು ಹೊಂದಿದೆ, ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳು ಈ ಪ್ರದೇಶದಲ್ಲಿ ನೆಲೆಗೊಂಡಿವೆ. ವಾರ್ಷಿಕವಾಗಿ ಸಾವಿರಾರು ಜನ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮತ್ತು ತಾಂತ್ರಿಕವಾಗಿ ಹೊರಹೊಮ್ಮಿಸುತ್ತಿದೆ.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) ಅಡಿಯಲ್ಲಿ ಮೊದಲನೇ ಹಂತದಲ್ಲಿ ಈಗಾಗಲೇ 12 ನಗರಗಳ ಪೈಕಿ 10 ನಗರಗಳನ್ನು ಘೋಷಿಸಿದ್ದು, ಶಿವಮೊಗ್ಗ ನಗರವನ್ನು ಈ ಯೋಜನೆಯಡಿ ಸೇರಿಸಿ ಕರ್ನಾಟಕ ರಾಜ್ಯದಲ್ಲಿ ಕೈಗಾರಿಕಾ ಕಾರಿಡಾರ್ ಸ್ಮಾರ್ಟ್ ಸಿಟಿಯನ್ನು ಸ್ಥಾಪಿಸುವುದು ಅತ್ಯವಶ್ಯಕವಾಗಿದೆ.
- ಶಿವಮೊಗ್ಗ ನಗರವು ಹಾಲೀ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿ ಹೊಂದಿರುತ್ತಿದೆ.
- ಶಿವಮೊಗ್ಗ ಮಹಾನಗರಕ್ಕೆ ಹೊಂದಿಕೊಂಡಂತೆ ದೇವಕಾತಿಕೊಪ್ಪ ಪ್ರದೇಶಲ್ಲಿ 280 ಎಕ್ರೆ, ಸೋಗಾನೆ ಪ್ರದೇಶದಲ್ಲಿ 580 ಎಕ್ರೆ, ಹಾಗೂ ವಿವಿಧ ಭಾಗಗಳಲ್ಲಿ 380 ಎಕ್ರೆ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ದಿಗಾಗಿ ಜಮೀನು ಲಭ್ಯವಿರುತ್ತದೆ.
- ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಪೂರೈಕೆಗಾಗಿ ಶರಾವತಿ ವಿದ್ಯುತ್ ತಯಾರಿಕಾ ಘಟಕವೂ ಸಹ ನಮ್ಮ ಜಿಲ್ಲೆಯಲ್ಲಿಯೇ ಇದೆ.
- ಸರಕು ಸಾಗಾಣಿಕೆ, ಸಾರಿಗೆ ಸಂಪರ್ಕ ವ್ಯವಸ್ಥೆಗಾಗಿ ಜಿಲ್ಲೆಯಲ್ಲಿ ವಾಯು ಸಾರಿಗೆ, ರೈಲ್ವೆ ಸಾರಿಗೆ, ರಸ್ತೆ ಸಾರಿಗೆ ವ್ಯವಸ್ಥೆಯು ಸಮರ್ಪಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿವೆ ಮತ್ತು ಜಲ ಸಾರಿಗೆಗಾಗಿ ಶಿವಮೊಗ್ಗ ಜಿಲ್ಲೆಯು ಕರಾವಳಿ ಭಾಗಕ್ಕೆ ಹೊಂದಿಕೊಂಡಿರುತ್ತದೆ.
- ನೈಸರ್ಗಿಕ ಸ್ವರ್ಗದಂತಿರುವ ಜಿಲ್ಲೆಯ ಪ್ರಾಕೃತಿಕ ಸಂಪತ್ತು ಕೈಗಾರಿಕೆಗಳಿಗೆ ಪೂರಕವಾಗಿರುತ್ತದೆ.
- ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಭಾಗಗಳಿಗೆ ಸಂಪರ್ಕ ಕೊಂಡಿಯಂತಿರುವ ಶಿವಮೊಗ್ಗ ಎಲ್ಲಾ ಭಾಗದ ಜನಗಳಿಗೆ ಔದ್ಯೋಗಿಕ ನ್ಯಾಯ ಒದಗಿಸುವ ಪ್ರದೇಶವಾಗಿರುತ್ತದೆ.
- ಶಿವಮೊಗ್ಗವು ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಕೇಂದ್ರ ಸ್ಥಾನದಲ್ಲಿದ್ದು ಕೈಗಾರಿಕೆಗಳಿಗೆ ಸೂಕ್ತ ಪ್ರದೇಶವಾಗಿರುತ್ತದೆ.
- ರಾಜ್ಯದ ನಿರುದ್ಯೋಗ ಸೂಚ್ಯಂಕ 3.9% ರಷ್ಟು ಇದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 4.5% ರಷ್ಟು ಇದ್ದು, ಈ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪಿಸಿದ್ದಲ್ಲಿ ಸ್ಥಳೀಯರಿಗೆ ಮತ್ತು ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.
- ಶಿವಮೊಗ್ಗದಲ್ಲಿ ಹಲವಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಡಿಪ್ಲೊಮೊ, ಇಂಜಿನಿಯರಿಂಗ್ ಕಾಲೇಜುಗಳಿದ್ದು, ಸಮರ್ಪಕವಾಗಿ ತಾಂತ್ರಿಕ ಸಿಬ್ಬಂದಿಗಳನ್ನು ಒದಗಿಸಬಹುದಾಗಿರುತ್ತದೆ. ಕೈಗಾರಿಕೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳೊಂದಿಗೆ ಮಾನವ ಶಕ್ತಿಯೂ ಸಹ ಲಭ್ಯವಿರುತ್ತದೆ.
ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ಅವಲೋಕಿಸಿ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) ಅಡಿಯಲ್ಲಿಮೊದಲನೇ ಹಂತದಲ್ಲಿಯಾದರೂ ಅಥವಾ ಎರಡನೇ ಹಂತದಲ್ಲಿಯಾದರೂ ಶಿವಮೊಗ್ಗ ನಗರವನ್ನು ಕೈಗಾರಿಕಾ ಸ್ಮಾರ್ಟ್ ಸಿಟಿ ಎಂದು ಘೋಷಿಸಿ ಅಭಿವೃದ್ದಿಪಡಿಸಲು ಶಿವಮೊಗ್ಗ ಜಿಲ್ಲೆ ಜನತೆಯ ಪರವಾಗಿ ಘನ ಭಾರತ ಸರ್ಕಾರಕ್ಕೆ ತಮ್ಮ ಮೂಲಕ ವಿನಂತಿಸುತ್ತೇನೆ ಎಂದರು.