ವಿಶ್ವಕರ್ಮರನ್ನು ಪ್ರಪಂಚದ ‘ದೈವಿಕ ಇಂಜಿನಿಯರ್’ ಎಂದು ಕರೆಯಲಾಗುತ್ತದೆ. ಅವರು ವಾಸ್ತುಶಿಲ್ಪಿಗಳ ಪ್ರಧಾನ ದೇವರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಶ್ರೀ ವಿಶ್ವಕರ್ಮರನ್ನು ಕುರಿತು ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ವಿಶ್ವಕರ್ಮ ಜಯಂತಿ ಒಂದು ಪವಿತ್ರವಾದ ದಿನ. ಬ್ರಹ್ಮನ ಮಗನಾದ ವಿಶ್ವಕರ್ಮನು ಶಿಲ್ಪಕಲೆ, ವಾಸ್ತುಶಿಲ್ಪ ಕರಕುಶಲತೆಯನ್ನು ಜಗತ್ತಿಗೆ ನೀಡಿದವರು. ಎಷ್ಟೇ ತಾಂತ್ರಿಕತೆ ಬೆಳೆದರೂ ಕಲೆ, ಸಾಹಿತ್ಯ, ಕೌಶಲ್ಯಗಳನ್ನು ಮಷೀನ್‌ಗಳು ಸೃಷ್ಟಿಸಲು ಸಾಧ್ಯವಿಲ್ಲ.
ಪ್ರಧಾನಮಂತ್ರಿಯವರು ಕುಶಲಕರ್ಮಿಗಳ ರಕ್ಷಣೆಗಾಗಿ ಹಾಗೂ ಯುವಜನತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆಂಬ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದು 8 ರಿಂದ 10 ಕೋಟಿ ಯುವ ಕುಶಲಕರ್ಮಿಗಳ ವೃತ್ತಿ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ರೈಲ್ವೇ, ವಿಮಾನ, ರಾಷ್ಟಿçÃಯ ಹೆದ್ದಾರಿಗಳು, ರಸ್ತೆಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಸರ್ವಾಂಗೀಣ ಅಭಿವೃದ್ದಿಯನ್ನು ಕಾಣುತ್ತಿದ್ದೇವೆ. ಮುಂದೆ ಸಹ ಜಿಲ್ಲೆಯ ಅಭಿವೃದ್ದಿಗೆ ತಾವು ಶ್ರಮಿಸುವುದಾಗಿ ಹೇಳಿದರು.


ಲಾಲ್ ಬಹದ್ದೂರ್ ಶಾಸ್ತಿç ಕಲಾ ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜಿನ ಇತಿಹಾಸ ಉಪನ್ಯಾಸಕ ನವೀನ್ ಜಿ. ಆಚಾರ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮರನ್ನು ನಾವು ಅನಂತ, ಅನಾದಿ ಎಂದು ಬಣ್ಣಿಸುತ್ತೇವೆ. 33 ಕೋಟಿ ದೇವರನ್ನು ಸೃಷ್ಟಿ ಮಾಡಿದವರು ವಿಶ್ವಕರ್ಮ. ದೊಡ್ಡ ದೊಡ್ಡ ಅರಮನೆಗಳು ಹಾಗೂ ಸೇತುವೆ ನಿರ್ಮಾಣಕಾರ ವಿಶ್ವಕರ್ಮ. ಖಗೋಳಶಾಸ್ತ್ರದ ಜ್ಞಾನವನ್ನೂ ಹೊಂದಿದ್ದ ವಿಶ್ವಕರ್ಮರ ಪಾಂಡಿತ್ಯ ಅಪಾರ. ಕುಶಲಕರ್ಮಿಗಳಾಗಿ ಬಹುಮುಖಿ ಸಾಧನೆಯನ್ನು ವಿಶ್ವಕರ್ಮರು ಮಾಡಿದ್ದಾರೆ ಎಂದು ತಿಳಿಸಿದ ಅವರು ಶ್ರೀ ವಿಶ್ವಕರ್ಮರ ಸೃಷ್ಟಿ ಮತ್ತು ಚರಿತ್ರೆ ಕುರಿತು ಮಾತನಾಡಿದರು.


ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿ, ವಿಶ್ವಕರ್ಮ ಧರ್ಮ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಶಿಲ್ಪ ಸಂಸ್ಕೃತಿ ಬೆಳೆಸಿದ ಸಮಾಜ. ವಿಶ್ವಕರ್ಮ ಸಮಾಜದವರು ಸುಸಂಸ್ಕೃತರಾಗಿದ್ದು, ಉನ್ನತ ಮಟ್ಟದ ಅಭಿವೃದ್ಧಿ ಹೊಂದಬೇಕು ಆಶಿಸಿದ ಅವರು ರಾಜ್ಯ ಸರ್ಕಾರ ಜನ ಸಾಮಾನ್ಯರು, ಬಡವರ ಆರ್ಥಿಕ ಸಬಲೀಕರಣಕ್ಕಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಅರ್ಹರೆಲ್ಲ ಇದರ ಲಾಭ ಪಡೆಯಬೇಕು. ಇನ್ನೂ ಸೌಲಭ್ಯ ಪಡೆಯದವರು ಇದರು ಸದುಪಯೋಗ ಪಡೆಯಬೇಕೆಂದರು.


ವಿಶ್ವಕರ್ಮ ಸಮಾಜದ ಮುಖಂಡರಾದ ಎಸ್.ರಾಮು ಮಾತನಾಡಿ, ಮೊದಲು ವಿಶ್ವಕರ್ಮ ಸಮುದಾಯದವರನ್ನು ಒಗ್ಗೂಡಿಸಲು ಪೂಜಾ ಕಾರ್ಯ ಮಾಡುತಿದ್ದೆವು. ಇದೀಗ ಸರ್ಕಾರ ವಿಶ್ವಕರ್ಮ ಜಯಂತಿಯ ಆಚರಣೆ ಜಾರಿಗೆ ತಂದಿದೆ. ಹಾಗೂ ನಮ್ಮ ಪ್ರಧಾನಿಯವರು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದು ಕುಶಲಕರ್ಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ವಿಶ್ವಕರ್ಮ ಸಮಾಜದಲ್ಲಿ 42 ಉಪ ಪಂಗಡಗಳಿದ್ದು ಎಲ್ಲರೂ ಒಗ್ಗೂಡಬೇಕೆಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.


ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದ ಅಧ್ಯಕ್ಷ ಸೋಮಾಚಾರಿ, ಸಮಾಜದ ಮುಖಂಡರಾದ ಅಗರದಹಳ್ಳಿ ನಿರಂಜನಮೂರ್ತಿ, ಶ್ರೀನಿವಾಸ್, ಹೆಚ್.ಎಂ.ಲೀಲಾ ಮೂರ್ತಿ, ರೂಪಾ ಚಂದ್ರಶೇಖರ್, ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು.

ವರದಿ ಪ್ರಜಾ ಶಕ್ತಿ