ಶಿಮುಲ್ ಸದೃಢವಾಗಿ ಇರಲು ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಬಲಿಷ್ಠವಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡ ಅವರು ತಿಳಿಸಿದರು.
ಅವರು ಮಾಚೇನಹಳ್ಳಿಯ ಶಿಮುಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಹಾಗೂ ಸಹಕಾರ ಇಲಾಖೆ ಇವರುಗಳ ಸಹಯೋಗದೊಂದಿಗೆ ಶಿವಮೊಗ್ಗ ಸಹಕಾರಿ ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿಗಳ ಮತ್ತು ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.


ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಬೇಕಾಗಿದ್ದು ಅಧಿಕಾರಿಗಳು, ಸಿಬ್ಬಂದಿಗಳು ಈ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ. ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಉಳಿದರೆ ಮಾತ್ರ ಕೆಎಂಎಫ್ ನಂದಿನಿ ಬ್ರಾಂಡ್ ಉಳಿಯಲು ಸಾಧ್ಯ. ಸಹಕಾರಿ ಸಂಘಗಳ ಕಾಯ್ದೆಗಳು ಸಾಕಷ್ಟು ತಿದ್ದುಪಡಿಯಾಗಿದ್ದು, ಹೊಸ ಕಾಯ್ದೆಗಳ ಅನುಗುಣವಾಗಿ ಅಧಿಕಾರಿಗಳು ಮಾಹಿತಿ ತಿಳಿದುಕೊಳ್ಳಬೇಕು. ಅದ್ದರಿಂದ ಕಾರ್ಯಾಗಾರಗಳು ಅಗತ್ಯವಾಗಿದ್ದು, ತರಬೇತಿಗಳಲ್ಲಿ ಅಧಿಕಾರಿಗಳು ಹೆಚ್ಚು ತೊಡಗಿಸಿಕೊಳ್ಳಬೇಕು ಆಗ ಮಾತ್ರ ಸಂಸ್ಥೆಗಳ ಬೆಳವಣಿಗೆ ಸಹಕಾರಿ ಆಗಲಿದೆ ಎಂದರು.


ತಾಲೂಕು ಕೇಂದ್ರಗಳಲ್ಲಿ ಸಣ್ಣ ಸಣ್ಣ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪ್ರಾಥಮಿಕ ಸಂಘಗಳ ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಗಳು ಕಾರ್ಪೋರೆಟ್ ಮಾದರಿಯಲ್ಲಿ ಸುಧಾರಣೆ ಆಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಒಕ್ಕೂಟ ಸದೃಢವಾಗಿ ಇರಲು ಸಹಕಾರಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು. ಕೃಷಿ ಕಾರ್ಮಿಕರಿಗೆ ನೆರವು ಆಗಲು ಪ್ರಾಥಮಿಕ ಹಾಲು ಒಕ್ಕೂಟಗಳು ಭದ್ರ ಬುನಾದಿಯಾಗಿದ್ದು, ಉತ್ತಮ ಗುಣಮಟ್ಟ ಮತ್ತು ಪರಿಶುದ್ಧತೆಯನ್ನು ಕಾಪಾಡಿಕೊಂಡು ಇನ್ನೂ ಹೆಚ್ಚಿನ ಮಾರುಕಟ್ಟೆಗಳನ್ನು ಸೃಷ್ಠಿಸಬೇಕಾಗಿದೆ.
ನಂದಿನಿ ಮಿಲ್ಕ್ ಪಾರ್ಲರ್‌ಗಳು ಇಡೀ ರಾಜ್ಯಾದ್ಯಂತ ಕೇಂದ್ರಗಳನ್ನು ಹೊಂದಿದ್ದು, ಶಿಮುಲ್ ವತಿಯಿಂದ ತೆರೆಯಲಾಗಿರುವ ಮಿಲ್ಕ್ ಪಾರ್ಲರ್‌ಗಳು ಗುಣಮಟ್ಟ ಪರಿಶೀಲಿಸಿ, ಮೂರು ಜಿಲ್ಲೆಗಳಲ್ಲಿ 500 ಕ್ಕೂ ಹೆಚ್ಚು ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಎಂದು ಸಲಹೆ ನೀಡಿದರು.


ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಹಾಲು ಉತ್ಪಾದಕರ ಕೊಡುಗೆ ಅಪಾರವಾಗಿದೆ. ಅವರ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಸಂಸ್ಥೆಯ ಬೆಳವಣಿಗೆಯೂ ಕೂಡ ಮುಖ್ಯವಾಗಿದೆ. ವರ್ಗಿಸ್ ಕುರಿಯನ್ ಅವರು ಹಾಕಿದ ಅಡಿಪಾಯ ದೇಶದಲ್ಲಿ ಅಮುಲ್ ಒಂದು ಬೃಹತ್ ಹಾಲು ಉತ್ಪಾದಕ ಸಂಸ್ಥೆಯಾಗಿದ್ದು, ನಂದಿನಿ ಕೂಡ ದೊಡ್ಡ ಬ್ರಾಂಡ್ ಆಗಿ ಬೆಳೆದಿದೆ. ಉತ್ಪಾದನೆ ಮಾರುಕಟ್ಟೆ ನಿರ್ವಹಣೆಗೆ ಬೇಕಾದ ತರಬೇತಿಗಳು ಗುಣಮಟ್ಟ ಮತ್ತು ಸಾಮಾರ್ಥ್ಯ ಹಾಗೂ ಕಾನೂನು ನಿಯಮಗಳ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಬೈಲಾಗಳ ಬಗ್ಗೆ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ತಿಳಿದುಕೊಳ್ಳಲು ತರಬೇತಿಗಳು ಅವಶ್ಯಕವಾಗಿದೆ. ಪ್ರತಿಯೊಂದು ಆಡಳಿತ ಮಂಡಳಿಗಳಿಗೆ ಉಪವಿಧಿ ಕಾಯ್ದೆಗಳ ಕುರಿತು ಪ್ರಾಥಮಿಕ ಜ್ಞಾನ ಇರಬೇಕು ಎಂದರು.

ಈ ಸಂದರ್ಭದಲ್ಲಿ ಸಹಕಾರ ಯೂನಿಯನ್ ಅಧ್ಯಕ್ಷ ಸುರೇಶ್ ವಾಟಗೋಡು, ಶಿಮುಲ್ ಅಧ್ಯಕ್ಷ ಹೆಚ್. ಎನ್. ವಿದ್ಯಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ, ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಡಿ.ಆನಂದ್, ಹೆಚ್ ಬಿ ದಿನೇಶ್ ,ಟಿ.ಎಸ್ ದಯಾನಂದ ಗೌಡ್ರು, ಎಸ್ ಕುಮಾರ್, ಯೂನಿಯನ್ ನಿರ್ದೇಶಕರುಗಳಾದ ಡಿ.ಎಸ್ ಈಶ್ವರಪ್ಪ, ಕರಿಯಪ್ಪ, ನಿಖಿಲ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕ ತೇಜವಮೂರ್ತಿ ಆರ್, ವ್ಯವಸ್ಥಾಪಕ ನಿರ್ದೇಶಕ ಎಸ್‌ಜಿ ಶೇಖರ್, ತರಬೇತಿ ಸಂಪನ್ಮೂಲ ವ್ಯಕ್ತಿ ಜಿ.ಕೆ ರಾಮಪ್ಪ, ಸಿಇಓ ಯಶವಂತ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ