ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದಿಂದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದವರು ಕಳೆದ 15 ದಿನಗಳಲ್ಲಿ ಎರಡು ಬಾರಿ ನ್ಯೂಮಂಡ್ಲಿಯ ಕೆ.ಆರ್. ವಾಟರ್ ವರ್ಕ್ಸ್ ನ ನೀರು ಶುದ್ಧೀಕರಣ ಮತ್ತು ಸರಬರಾಜು ಘಟಕಕ್ಕೆ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಬೇಟಿ ನೀಡಿ ನಗರದಲ್ಲಿ ಮಣ್ಣು ಮಿಶ್ರಿತ ನೀರು ಸರಬರಾಜಾಗುತ್ತಿರುವ ಬಗ್ಗೆ ವಾಸ್ತವಾಂಶ ಪರಿಶೀಲಿಸಲಾಯಿತು. ನೀರು ಸರಬರಾಜು ಇಲಾಖೆ ಹೇಳುವಂತೆ ಮಳೆಯ ಕಾರಣದಿಂದ ಆಧಿಕ ಮಣ್ಣೆನ ಅಂಶ ನೀರಿನಲ್ಲಿ ಇದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯವೇ ಹೊರತು ವಾಸ್ತವ ಸಂಗತಿ ಬೇರೆಯೇ ಆಗಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಕುಡಿಯುವ ನೀರು ಮಾನದಂಡಗಳ ಪ್ರಕಾರ ನೀರು ಶುದ್ಧೀಕರಣ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದ್ದು ಇವುಗಳ ಅಸಮರ್ಪಕ ಮತ್ತು ದೋಷಪೂರಿತ ಕಾರ್ಯ ನಿರ್ವಹಣೆಯೇ ಮಣ್ಣು ಮಿಶ್ರಿತ ನೀರು ಸರಬರಾಜಿಗೆ ಕಾರಣವಾಗಿದೆ.
ನದಿ ಮತ್ತು ಡ್ಯಾಮ್ ನಿಂದ ಏರೇಟರ್ ಗಳಿಗೆ ನೀರನ್ನು ಹಾಯಿಸಿ ಅಲ್ಲಿಂದ ನೀರು ಶುದ್ಧೀಕರಣ ಪ್ರಕ್ರಿಯೆಯ ಮೊದಲನೇ ಹಂತದಲ್ಲಿ ಆಲಂ ಟ್ರೀಟ್ಮೆಂಟ್ ಗೆ ಒಳಪಡಿಸಿ ಶುದ್ಧೀಕರಿಸಬೇಕಾಗುತ್ತದೆ. ಈ ಘಟಕದಲ್ಲಿ ಈ ಹಿಂದೆ ಉಪಯೋಗಿಸುತ್ತಿದ್ದ ಘನ ಆಲಂ ಕೇಕ್ ಗೆ ಬದಲಾಗಿ ಪಾಲಿ ಅಲ್ಯೂಮಿನಿಯಂ ಕ್ಲೋರೈಡ್ ಈ ರಾಸಾಯನಿಕದ ಪುಡಿಯನ್ನು ಸ್ಲರಿ ರೂಪದಲ್ಲಿ ಬಳಸಲಾಗುತ್ತಿದೆ. ಇದರಿಂದ ಟ್ರೀಟ್ಮೆಂಟ್ ಪ್ಲಾಂಟ್ ನಲ್ಲಿ ವೈಜ್ಞಾನಿಕವಾಗಿ ಮಣ್ಣಿನ ಕಣಗಳು ಕೆಳಭಾಗದಲ್ಲಿ ಸಂಗ್ರಹಗೊಳ್ಳಬೇಕಾಗಿದ್ದು ಈ ಕಾರ್ಯವು ಅಪೂರ್ಣವಾಗಿ ನಡೆಯುತ್ತಿದೆ. ಹಾಗಾಗಿ ಮಣ್ಣು ಮಿಶ್ರಿತ ನೀರು ಇಲ್ಲಿಂದ ಮುಂದಿನ ಟ್ಯಾಂಕಿಗೆ ಸರಬರಾಜಾಗುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
ಆಲಂ ಟ್ರೀಟ್ಮೆಂಟ್ ಘಟಕವು ಅತ್ಯಂತ ಶಿಥಿಲವಾಗಿದ್ದು ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.
ಆಲಮ್ ಟ್ರೀಟ್ಮೆಂಟ್ ನಂತರದಲ್ಲಿ ನೀರನ್ನು ಸಂಗ್ರಹಿಸಲಾಗುವ ದೊಡ್ಡ ನೀರಿನ ತೊಟ್ಟಿಗಳಲ್ಲಿ ಅಳವಡಿಸಲಾಗಿರುವ ಕ್ಲಾರಿ ಪ್ಲಾಕ್ಯುಲೇಟರ್ CF1, CF2 & CF3 ಯಂತ್ರಗಳು ಹಲವು ತಿಂಗಳುಗಳಿಂದ ಕಾರ್ಯನಿರ್ವಹಿಸದೆ ಇರುವುದು ಮಣ್ಣು ಮಿಶ್ರಿತ ನೀರು ಸರಬರಾಜಿಗೆ ಮೂಲ ಕಾರಣವಾಗಿದೆ.
ನದಿ ಮತ್ತು ಡ್ಯಾಮ್ ನಿಂದ ಸರಬರಾಜು ಆಗುವ ಮಣ್ಣು ಮಿಶ್ರಿತ ನೀರಿನಲ್ಲಿರುವ ಶೇಕಡ 75 ಭಾಗದ ಮಣ್ಣನ್ನು ಈ ಯಂತ್ರಗಳು ತಮ್ಮ ತಿರುಗುವ ಬಲದಿಂದ ಬೇರ್ಪಡಿಸಿ ಹೊರಹಾಕುವ ಕಾರ್ಯವನ್ನು ನಿರ್ವಹಿಸದೆ ಇರುವುದರಿಂದ ನೀರಿನಲ್ಲಿ ಮಣ್ಣಿನ ಅಂಶ ಹಾಗೆಯೇ ಉಳಿಯುತ್ತಿದೆ. ಹಲವು ವರ್ಷಗಳಷ್ಟು ಹಳೆಯದಾದ ದೋಷಪೂರಿತ ಫ್ರಾಕ್ಯುಲೇಟರ್ ಮತ್ತು ಕ್ಲಾರಿಫ್ಲೈಯರ್ ಯಂತ್ರಗಳನ್ನು ಶೀಘ್ರವೇ ದುರಸ್ತಿಗೊಳಿಸುವ ಅಥವಾ ಬದಲಾಯಿಸುವ ಅವಶ್ಯಕತೆ ಇದೆ. ಈ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇದ್ದಲ್ಲಿ ನೀರಿನಲ್ಲಿ ಮಣ್ಣಿನ ಪ್ರಮಾಣ ಜಾಸ್ತಿಯಾಗುವುದರ ಜೊತೆಗೆ ಕೆಳಭಾಗದಲ್ಲಿ ಸಂಗ್ರಹವಾಗುವ ಮಣ್ಣಿನ ಹೂಳು ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ.
ಮೂರನೇ ಹಂತದಲ್ಲಿ ಕುಡಿಯುವ ನೀರಿನಲ್ಲಿ ರೋಗರುಜಿನಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಹಾಗೂ ಇತರೆ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಲು ಕ್ಲೋರಿನ್ ರಾಸಾಯನಿಕವನ್ನು ದ್ರವ ಅಥವಾ ಅನಿಲ ರೂಪದಲ್ಲಿ ಎಚ್ಚರಿಕೆಯೊಂದಿಗೆ ಬಳೆಸಬೇಕಾಗಿದೆ. ಏಕೆಂದರೆ ಕುಡಿಯುವ ನೀರಿನಲ್ಲಿ ಬಳಸುವ ಕ್ಲೋರಿನ್ ಪ್ರಮಾಣ ಕಡಿಮೆಯಾದರೆ ನೀರಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗದೆ ಜೀರ್ಣಾಂಗ ವ್ಯವಸ್ಥೆಯ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಕ್ಲೋರಿನ್ ಪ್ರಮಾಣ ಜಾಸ್ತಿಯಾದಲ್ಲಿ ಗಂಟಲು ಉರಿ, ಉಸಿರಾಟದ ತೊಂದರೆ, ಎದೆ ಬಿಗಿತ, ಕರುಳಿನ ತೊಂದರೆ, ಕಣ್ಣು ಹಾಗೂ ಚರ್ಮದ ತುರಿಕೆಗಳು ಇವೆ ಮುಂತಾದ ತೀವ್ರತರವಾದ ತೊಂದರೆಗಳಿಗೆ ಒಳಪಡಬೇಕಾಗುತ್ತದೆ ಎಂದರು.
ಕೆಆರ್ ವಾಟರ್ ವರ್ಕ್ಸ್ ನ ಕ್ಲೋರಿನ್ ಘಟಕದಲ್ಲಿ ಯಾವ ಪ್ರಮಾಣದಲ್ಲಿ ಕ್ಲೋರಿನ್ ಬಳಸಬೇಕು ಎನ್ನುವುದರ ಬಗ್ಗೆ ಅಳತೆಯ ಮಾಪನವೇ ಇರುವುದಿಲ್ಲ. ಕೇವಲ ಅಂದಾಜಿನಲ್ಲಿ ಕ್ಲೋರಿನ್ ಅನ್ನು ಅನಿಲ ರೂಪದಲ್ಲಿ ಸಿಲಿಂಡರ್ ಮೂಲಕ ಹಾಯಿಸಲಾಗುತ್ತಿದೆ.
ಕುಡಿಯುವ ನೀರು, ಶುದ್ಧೀಕರಣ ಮಾನದಂಡಗಳ ಪ್ರಕಾರ ಶುದ್ಧೀಕರಣಕ್ಕೆ ಮೊದಲು (Pre Chlorination) ಮತ್ತು ಶುದ್ಧೀಕರಣದ ನಂತರ (Post Chlorination) ಬಳಸಬೇಕಾದ ಕ್ಲೋರಿನ್ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.
ಕುಡಿಯುವ ನೀರು ಮಾನದಂಡಗಳ ಪ್ರಕಾರ ಕುಡಿಯುವ ನೀರಿನಲ್ಲಿ ಪರೀಕ್ಷಿಸಬೇಕಾದ Ph, ಟರ್ಬಿಡಿಟಿ ಪ್ರಮಾಣ, ನೀರಿನಲ್ಲಿ ಇರಬಹುದಾದ ಇತರೆ ಅನುಪಯುಕ್ತ ಹಾಗೂ ಆರೋಗ್ಯಕ್ಕೆ ಮಾರಕವಾದ ಖನಿಜಗಳ ಪ್ರಮಾಣದ ಪರೀಕ್ಷೆಗಳು, ಕ್ಲೋರಿನ್ ಪರೀಕ್ಷೆ, ಸೂಕ್ಷ್ಮಾಣು ಜೀವಿಗಳ ಪರೀಕ್ಷೆ ಇವೇ ಮುಂತಾದ ಪರೀಕ್ಷೆಗಳನ್ನು ನಡೆಸಲು ಬೇಕಾದ ಸುಸಜ್ಜಿತ ಪ್ರಯೋಗಾಲಯ ಹಾಗೂ ಪ್ರಯೋಗಾಲಯ ತಜ್ಞರ ಕೊರತೆ ಎದ್ದು ಕಾಣುತ್ತಿದೆ ಎಂದರು.
ಈ ಎಲ್ಲಾ ತೊಂದರೆಗಳು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕಂಡು ಬರುತ್ತಿದ್ದರೂ ತುರ್ತು ಗಮನಹರಿಸದೆ ಇರುವುದು ಇಂದಿನ ಅವ್ಯವಸ್ಥೆಗೆ ಹಾಗೂ ಜನರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಿದೆ ಎನ್ನುವುದು ವಾಸ್ತವಾಂಶವಾಗಿದೆ.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯು ಕಳೆದ ಏಳೆಂಟು ವರ್ಷಗಳಲ್ಲಿ ಹಲವು ಬಾರಿ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಮೇಲ್ಕಂಡ ಎಲ್ಲಾ ಘಟಕಗಳನ್ನು ದುರಸ್ತಿಗೊಳಿಸಿ, ನೀರು ಶುದ್ದೀಕರಣ ಮಾನದಂಡಗಳಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ನಿರ್ವಹಣೆಗೆ ಒಳಪಡಿಸಿ ಎಂದು ಹಲವು ಬಾರಿ ಒತ್ತಾಯ ಮಾಡಿದೆ. ಆದರೆ ಇಲ್ಲಿಯವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದು ನೋವಿನ ಸಂಗತಿಯಾಗಿದೆ.
ನೀರು ಶುದ್ಧೀಕರಣ ಘಟಕದ ಒಳಭಾಗ ಮತ್ತು ಹೊರಭಾಗಗಳಲ್ಲಿ ಅಸಮರ್ಪಕ ನಿರ್ವಹಣೆಯಿಂದ ಸ್ವಚ್ಛತೆಯೇ ಇಲ್ಲ ಎನ್ನುವುದು ಕಣ್ಣಿಗೆ ಎದ್ದು ಕಾಣುತ್ತದೆ.
ಕುಡಿಯುವ ನೀರಿನ ಶುದ್ಧೀಕರಣ ಮತ್ತು ಸರಬರಾಜು ಈ ಎರಡೂ ವಿಭಾಗಗಳಲ್ಲಿ ಜಲಮಂಡಳಿಯವರು ವಿಫಲರಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ವಿಫಲವಾದ 247 ಕುಡಿಯುವ ನೀರಿನ ಯೋಜನೆ…
24*7 ಕುಡಿಯುವ ನೀರಿನ ಯೋಜನೆಯನ್ನು ಶಿವಮೊಗ್ಗ ನಗರಕ್ಕೆ ತಂದು ಪ್ರತಿ ಮನೆಗಳ ಮೊದಲನೇ ಮಹಡಿಯವರೆಗೆ ನೀರು ಬರುತ್ತದೆ, ಯಾವುದೇ ವಿದ್ಯುತ್ ಮೋಟರ್ ಬಳಸುವ ಅವಶ್ಯಕತೆ ಇರುವುದಿಲ್ಲ ಎಂದು ಜನತೆಯನ್ನು ಸುಳ್ಳು ಹೇಳಿ ನಂಬಿಸಿ ಶಿವಮೊಗ್ಗದ ಜನತೆ ಈಗ ದಿನನಿತ್ಯದ ನೀರಿಗೆ ಹಾಹಾಕಾರ ಪಡುತ್ತಿರುವುದು ನಿಮಗೆ ಕಾಣಿಸುವುದಿಲ್ಲವೇ ?
ಯಾರಿಗೂ ಬೇಡವಾದ ಈ ಯೋಜನೆಯನ್ನು 236 ಕೋಟಿ ರೂ ವೆಚ್ಚದಲ್ಲಿ ಶಿವಮೊಗ್ಗ ನಗರಕ್ಕೆ ತಂದು ಗುಣಮಟ್ಟದ ಪೈಪುಗಳು ಮತ್ತು ಇತರೆ ಉಪಕರಣಗಳನ್ನು ಬಳಸದೆ, ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ವಿಫಲಗೊಳಿಸಿದ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ?
ನಮಗೆ ಶಾಸಕರು ಮತ್ತು ಜಲಮಂಡಳಿಯ ಜವಾಬ್ದಾರಿಯುತ ಅಧಿಕಾರಿಗಳು ಶೀಘ್ರವಾಗಿ ಸಭೆಯನ್ನು ಕರೆದು ವಿಸ್ತೃತವಾಗಿ ಚರ್ಚಿಸಿ ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ.
ತಾವುಗಳು ಸಭೆ ಕರೆಯಲು ವಿಫಲರಾದಲ್ಲಿ ಇದಕ್ಕೆ ತಾವುಗಳೇ ಸಂಪೂರ್ಣ ಜವಾಬ್ದಾರರು ಎನ್ನುವುದು ಸಾರ್ವಜನಿಕವಾಗುತ್ತದೆ.
ಮುಂದಿನ 10 ದಿನಗಳಲ್ಲಿ ದೋಷಪೂರಿತ ವ್ಯವಸ್ಥೆಗಳು ದುರಸ್ತಿಗೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ವಿಫಲವಾದರೆ ನಾಗರಿಕ ಹಿತರಕ್ಷಣಾ ವೇದಿಕೆಯು ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುತ್ತದೆ ಎನ್ನುವ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತೇವೆ ಎಂದರು.