ಜಿಲ್ಲಾ ಬಿಜೆಪಿ ವತಿಯಿಂದ ವಕ್ಫ್ ವಿರುದ್ಧ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.ಕರ್ನಾಟಕ ರಾಜ್ಯವನ್ನು ಮುಸ್ಲಿಂ ಆಸ್ತಿ ಮಾಡಲು ಹೊರಟ ವಕ್ಫ್ ಕಾಯ್ದೆ ವಿರುದ್ಧ ರೈತರ ಜಮೀನು ಉಳಿಸುವುದಕ್ಕೆ ಬಿಜೆಪಿ ಹೋರಾಟ ಪ್ರಾರಂಭಿಸಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ವತಿಯಿಂದ ವಕ್ಫ್ ಮಂಡಳಿ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಾಂತವಾದ ಕರ್ನಾಟಕದಲ್ಲಿ ಸದ್ದಿಲ್ಲದೆ ನೂರಾರು ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿ ರೈತರಿಗೆ ನೋಟೀಸ್ ನೀಡುತ್ತಿರುವ ಸರ್ಕಾರ ರಾಜ್ಯದ ಮುಜುರಾಯಿ ದೇವಾಲಯಗಳು, ಪುರಾತತ್ವ ಇಲಾಖೆಯ ಆಸ್ತಿಗಳು, ಮಠ ಮಂದಿರಗಳು ಮತ್ತು ಶಾಲಾ ಜಮೀನುಗಳನ್ನು ವಕ್ಫ್ ಆಸ್ತಿ ಮಾಡಲು ಸರ್ಕಾರ ಹೊರಟಿದೆ. ಇದಕ್ಕೆ ಮುಖ್ಯ ಕಾರಣ ವಸತಿ ಸಚಿವ ಜಮೀರ್ ಅಹಮ್ಮದ್ ಆಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು, ಸಂಪುಟದಿಂದ ವಜಗೊಳಿಸಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ದೊಡ್ಡ ಮಟ್ಟದ ಹೋರಾಟ ಬಿಜೆಪಿ ನಡೆಸಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಲುಬಿಲ್ಲದ ನಾಲಿಗೆ ನಿಮ್ಮದು ನೋಟೀಸ್ ಹಿಂಪಡೆದ ತಕ್ಷಣ ಪಹಣಿಯಲ್ಲಿ ಬದಲಾವಣೆಯಾಗುವುದಿಲ್ಲ. ತಾಕತ್ತಿದ್ದರೆ ವಕ್ಫ್ ಕಾನೂನನ್ನೇ ಬದಲಾವಣೆ ಮಾಡಿ, ಇಲ್ಲವಾದರೆ ಈಗ ನಮ್ಮ ಪ್ರಧಾನಿ ಮಾಡಲು ಹೊರಟಿದ್ದಾರೆ. ಅವರಿಗೆ ಬೇಷರತ್ತು ಬೆಂಬಲ ನೀಡಿ, ನಮ್ಮ ಕಾನೂನು ಬದ್ಧ ಹೋರಾಟವನ್ನು ತಡೆಯುವ ದುಸ್ಸಾಹಕ್ಕೆ ಕೈಹಾಕಬೇಡಿ ಎಂದರು.

ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಅಶೋಕ್‌ನಾಯ್ಕ್, ಎಸ್.ಎಸ್.ಜ್ಯೋತಿ ಪ್ರಕಾಶ್ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಸ್ಥಳದಲ್ಲಿ ಹೈಡ್ರಾಮಾ ನಡೆಯಿತು. ಪ್ರಮುಖರನ್ನು ಬಂಧಿಸುತ್ತಿದ್ದಂತ್ತೆ ಬಿಜೆಪಿ ಮಹಿಳಾ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಸಣ್ಣ ಗಾಯವಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ಪೊಲೀಸ್ ದೌರ್ಜನ್ಯ ವಿರುದ್ಧ ಮತ್ತೆ ಪ್ರತಿಭಟನೆಗೆ ಇಳಿದರು. ಅರ್ಧಗಂಟೆ ಕಾಲ ಬಿಗುವಿನ ವಾತಾವರಣ ಉಂಟಾಯಿತು. ಬಳಿಕ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಧರಣಿ ವಾಪಸ್ಸು ಪಡೆದರು.

ಪ್ರತಿಭಟನೆಯಲ್ಲಿ ಸಂದರ್ಭದಲ್ಲಿ ಮಹಿಳಾ ಪ್ರಮುಖರಾದ ಸುರೇಖಾ ಮುರಳೀಧರ್, ಶಾಂತ ಸುರೇಂದ್ರ ,ರಶ್ಮಿ ಶ್ರೀನಿವಾಸ್, ಚೈತ್ರಪೈ, ಯಶೋಧ ನಾಗರಾಜ್, ದೀಪ, ಗೌರಿ ಶ್ರೀನಾಥ್, ನಿರ್ಮಲಾ, ಯಮುನಾ ಇದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *